ಖಲಿಸ್ತಾನಿ ಉಗ್ರ ಎಂದು ಪರಿಗಣಿಸಲ್ಪಟ್ಟಿದ್ದ, ಖಲಿಸ್ತಾನ್ ಕಮಾಂಡೋ ಫೋರ್ಸ್ (KCF)ನ ಮುಖ್ಯಸ್ಥನಾಗಿದ್ದ ಪರಮ್ಜಿತ್ಸಿಂಗ್ ಪಂಜ್ವಾರ್ (Paramjit Singh Panjwar) ಅಲಿಯಾಸ್ ಮಲಿಕ್ ಸರ್ದಾರ್ ಸಿಂಗ್ನನ್ನು ಇಂದು ಪಾಕಿಸ್ತಾನದ ಲಾಹೋರ್ನ ಜೋಹಾರ್ ಪಟ್ಟಣದಲ್ಲಿ ಹತ್ಯೆ ಮಾಡಲಾಗಿದೆ. ಇಬ್ಬರು ಅಪರಿಚಿತ ಶೂಟರ್ಗಳು ಪರಮ್ಜಿತ್ ಸಿಂಗ್ನನ್ನು ಕೊಂದಿದ್ದಾರೆ. ಜೋಹಾರ್ ಪಟ್ಟಣದಲ್ಲಿರುವ ಸನ್ಫ್ಲವರ್ ಸೊಸೈಟಿ ಎಂಬಲ್ಲಿ ಪಂಜ್ವಾರ್ ಮನೆಯಿದ್ದು, ಇಂದು ಮುಂಜಾನೆ 6ಗಂಟೆ ಹೊತ್ತಿಗೆ ಈತ ತನ್ನ ಮನೆಯ ಸಮೀಪವೇ ವಾಕಿಂಗ್ ಮಾಡುತ್ತಿದ್ದ. ಆಗ ಮೋಟರ್ಸೈಕಲ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಪರಮ್ಜಿತ್ಸಿಂಗ್ ಪಂಜ್ವಾರ್ಗೆ ಶೂಟ್ ಮಾಡಿದ್ದಾರೆ (Paramjit Singh Panjwar Killed). ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಬದುಕುಳಿಯಲಿಲ್ಲ.
ಪರಮ್ಜಿತ್ ಪಂಜ್ವಾರ್ ಹುಟ್ಟಿದ್ದು ಪಂಜಾಬ್ನ ತರಣ್ ತಾರಣ್ ಬಳಿಕ ಪಂಜ್ವಾರ್ ಎಂಬ ಹಳ್ಳಿಯಲ್ಲಿ. ತನ್ನೂರಿನ ಹೆಸರನ್ನು ತನ್ನ ಹೆಸರಿನೊಂದಿಗೆ ಈತ ತಳುಕುಹಾಕಿಕೊಂಡಿದ್ದ. 1986ರಲ್ಲಿ ತನ್ನ ಸೋದರ ಸಂಬಂಧಿ ಲಾಭ್ ಸಿಂಗ್ ಎಂಬುವನ ಮೂಲಕ ಖಲಿಸ್ತಾನ್ ಕಮಾಂಡೋ ಫೋರ್ಸ್ಗೆ ಸೇರ್ಪಡೆಯಾದ. ಅದಕ್ಕೂ ಮೊದಲು ಅವನು ಸೋಹಲ್ನ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಲಾಭ್ ಸಿಂಗ್ ಈ ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥನಾಗಿದ್ದ. 19990ರ ದಶಕದಲ್ಲಿ ಇವನನ್ನು ಭಾರತೀಯ ಭದ್ರತಾ ಪಡೆಗಳು ಕೊಂದು ಹಾಕಿದವು. ಅದಾದ ಬಳಿಕ ಕೆಸಿಎಫ್ ಮುಖ್ಯಸ್ಥನ ಸ್ಥಾನಕ್ಕೆ ಈ ಪರಮ್ಜಿತ್ ಸಿಂಗ್ ಏರಿದ್ದ.
ಇದನ್ನೂ ಓದಿ: Amritpal Singh: ಜೈಲಿಂದ ಬಿಟ್ಟರೆ ನಿಮಗೆ ಸಹಾಯ ಮಾಡ್ತೇನೆ ಎಂದು ಪೊಲೀಸರಿಗೆ ಹೇಳಿದ ಅಮೃತ್ಪಾಲ್ ಸಿಂಗ್
ಪ್ರತ್ಯೇಕ ಖಲಿಸ್ತಾನ ಹೋರಾಟದಲ್ಲಿ ಸಕ್ರಿಯನಾಗಿದ್ದ ಈತ ಗಡಿಯಾಚೆಯ ದೇಶಗಳಿಗೆ ಶಸ್ತ್ರಾಸ್ತ್/ ಮಾದಕ ವಸ್ತುಗಳನ್ನು ಪೂರೈಕೆ/ಕಳ್ಳಸಾಗಣೆ ಮಾಡುವ ಮೂಲಕ ಹಣ ಗಳಿಸುತ್ತಿದ್ದ. ಪಾಕಿಸ್ತಾನದ ಸರ್ಕಾರದ ಅನುಮತಿ ಇಲ್ಲದೆಯೂ, ಕಾನೂನು ಬಾಹಿರವಾಗಿ ಅವನು ಲಾಹೋರ್ನಲ್ಲಿ ವಾಸವಾಗಿದ್ದ. ಇವನ ಪತ್ನಿ, ಮಕ್ಕಳೆಲ್ಲ ಬಹಳ ಹಿಂದೆಯೇ ಜರ್ಮನಿಗೆ ಸ್ಥಳಾಂತರಗೊಂಡಿದ್ದಾರೆ. ಹತ್ಯೆ, ಸಂಚು, ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆ, ಸಿಖ್ ದಂಗೆಯನ್ನು ಪುನರುಜ್ಜೀವನಗೊಳಿಸಲು ಪಿತೂರಿ ಸೇರಿ ಹತ್ತು ಹಲವು ಕೇಸ್ಗಳಲ್ಲಿ ಪರಮ್ಜಿತ್ಸಿಂಗ್ ಪಂಜ್ವಾರ್ ಭಾರತದ ವಾಂಟೆಡ್ ಲಿಸ್ಟ್ನಲ್ಲಿ ಇದ್ದ.