ಖಲಿಸ್ತಾನಿಗಳು ಭಾರತದಲ್ಲಿದ್ದುಕೊಂಡು ಭಾರತದ ವಿರುದ್ಧ ಕತ್ತಿ ಮಸೆಯುವ ಜತೆಗೆ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿ ವಿವಿಧ ದೇಶಗಳಲ್ಲೂ ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ಆ ದೇಶಗಳಲ್ಲಿರುವ ಹಿಂದು ದೇಗುಲಗಳನ್ನು ಧ್ವಂಸ ಮಾಡುವುದು, ಭಾರತೀಯರನ್ನು ಹೀಗಳೆಯುವುದು ಇತ್ಯಾದಿ ಕುಕೃತ್ಯದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಯುಕೆಯಲ್ಲಿರುವ ಭಾರತದ ರಾಯಭಾರಿ ಕಚೇರಿ ಮೇಲಿನ ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸಿದ್ದರು. ಈಗ ಯುಎಸ್ನಲ್ಲಿರುವ ಭಾರತೀಯ ಪತ್ರಕರ್ತರೊಬ್ಬರ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ, ಅವರನ್ನು ಅತ್ಯಂತ ಕೆಟ್ಟದಾಗಿ ನಿಂದಿಸಿದ ಘಟನೆ ಬೆಳಕಿಗೆ ಬಂದಿದೆ.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ)ದ ಯುಎಸ್ನ ವಿಶೇಷ ವರದಿಗಾರನಾಗಿರುವ ಲಲಿತ್ ಕುಮಾರ್ ಝಾ ಅವರು ಯುಎಸ್ನ ಭಾರತೀಯ ರಾಯಭಾರಿ ಕಚೇರಿ ಎದುರು ನಡೆಯುತ್ತಿದ್ದ ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದರು. ಅದೇ ವೇಳೆ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ, ಅಷ್ಟೇ ಅಲ್ಲ, ನಿಂದಿಸಿದ್ದಾರೆ. ‘ಖಲಿಸ್ತಾನಿ ಬೆಂಬಲಿಗರು ನನ್ನ ಎಡಭಾಗದ ಕಿವಿಯ ಮೇಲೆ ಬಡಿಗೆಯಿಂದ ಹೊಡೆದಿದ್ದಾರೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ರಕ್ಷಿಸಿದ ಯುಎಸ್ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ. ಖಲಿಸ್ತಾನಿ ಬೆಂಬಲಿಗರ ವಿಡಿಯೊವನ್ನೂ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು
‘ನಾನು ಆಸ್ಪತ್ರೆಯಿಂದ ಈ ಟ್ವೀಟ್ ಮಾಡುತ್ತಿದ್ದೇನೆ. ನಾನು ನನ್ನ ಕೆಲಸ ಮಾಡುತ್ತಿದ್ದೆ. ಆದರೆ ಆಗೊಬ್ಬ ಬಂದು ನನ್ನ ಎಡ ಭಾಗದ ಕಿವಿ ಮೇಲೆ ಹೊಡೆದ. ಅಲ್ಲಿಗೆ ಬಂದವರು ನನ್ನನ್ನು ಅಶ್ಲೀಲವಾಗಿ ನಿಂದಿಸಿದರು. ನಾನು ಕೂಡಲೇ ಪೊಲೀಸರಿಗೆ ಕರೆ ಮಾಡಿದೆ. ತಕ್ಷಣವೇ ಅಲ್ಲಿಗೆ ಬಂದ ರಕ್ಷಣಾ ಸಿಬ್ಬಂದಿ ನಮ್ಮನ್ನು ಕಾಪಾಡಿದರು’ ಎಂದು ಬರೆದುಕೊಂಡಿದ್ದಾರೆ. ಹಾಗೇ, ‘ನೀನು ಇದನ್ನು ಭಾರತ ಸರ್ಕಾರಕ್ಕೆ ಹೇಳಿಕೊಳ್ಳುವುದಾದರೆ ಹೇಳು ಎಂದು ಒಬ್ಬಾತ ಪತ್ರಕರ್ತನಿಗೆ ಹೇಳುವುದನ್ನು ವಿಡಿಯೊದಲ್ಲಿ ನೋಡಬಹುದು. ಆಗ ಬಂದ ಇನ್ನೊಬ್ಬಾತ, ಭಾರತದಲ್ಲಿ ಫ್ಯಾಸಿಸ್ಟ್ ಸರ್ಕಾರವಿದೆ ಎಂಬುದನ್ನು ಈ ಪತ್ರಕರ್ತನಿಗೆ ಹೇಳಿ ಎನ್ನುತ್ತಾನೆ. ಅಷ್ಟೇ ಅಲ್ಲ, F*** ಎಂಬ ಆಶ್ಲೀಲ ಶಬ್ದದಿಂದ ಅವನನ್ನು ನಿಂದಿಸುತ್ತಾರೆ.
ಹಲ್ಲೆ ಖಂಡಿಸಿದ ಭಾರತ-ಯುಎಸ್
ಭಾರತದ ಪತ್ರಕರ್ತನ ಮೇಲೆ ಖಲಿಸ್ತಾನಿಗಳು ದಾಳಿ ಮಾಡಿದ್ದನ್ನು ಯುಎಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತೀವ್ರವಾಗಿ ಖಂಡಿಸಿದೆ. ಪ್ರಕಟಣೆ ಹೊರಡಿಸಿರುವ ರಾಯಭಾರಿ ಕಚೇರಿ ‘ಒಬ್ಬ ಹಿರಿಯ ಪತ್ರಕರ್ತನ ಮೇಲೆ ಅನಗತ್ಯವಾಗಿ ಮತ್ತು ಗಂಭೀರವಾಗಿ ದಾಳಿ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಖಲಿಸ್ತಾನಿ ಹೋರಾಟಗಾರರು ಮತ್ತು ಅವರ ಬೆಂಬಲಿಗರ ಸಮಾಜವಿರೋಧಿ ಪ್ರವೃತ್ತಿಗೆ ಇಂಥ ಘಟನೆಗಳು ಸಾಕ್ಷಿ. ಅವರು ಪದೇಪದೆ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಹೇಳಿದೆ. ಹಾಗೇ, ಭಾರತದಲ್ಲಿರುವ ಯುಎಸ್ ರಾಯಭಾರಿ ಕಚೇರಿ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಹಿರಿಯ ವರದಿಗಾರನ ಮೇಲೆ ಹಲ್ಲೆ ನಡೆದ ವಿಡಿಯೊವನ್ನು ನೋಡಿದೆವು. ನಿಜಕ್ಕೂ ಖೇದವಾಯಿತು. ಇಂಥ ಘಟನೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದೆ.