ಬ್ರಿಸ್ಬೆನ್, ಆಸ್ಟ್ರೇಲಿಯಾ: ಖಲಿಸ್ತಾನಿ ಪರ ಬೆಂಬಲಿಗರು ವಿದೇಶಗಳಲ್ಲಿ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ಮುಂದುವರಿದಿದೆ. ಆಸ್ಟ್ರೇಲಿಯಾದ(Australia) ಬ್ರಿಸ್ಬೆನ್‌ನಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇಗುಲವನ್ನು (Hindu Temple) ಖಲಿಸ್ತಾನಿ ಬೆಂಬಲಿಗರೂ ಧ್ವಂಸಗೊಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಿರಂತರವಾಗಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಹಾಗಿದ್ದೂ, ಖಲಿಸ್ತಾನಿ ಪರ ಬೆಂಬಲಿಗರ ವಿರುದ್ಧ ಅಲ್ಲಿನ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಕೇಳಿ ಬಂದಿದೆ. ಈ ಹಿಂದೆ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ಅವರು ಕ್ರಮಕ್ಕೆ ಆಗ್ರಹಿಸಿದ್ದರು.
ಆಸ್ಟ್ರೇಲಿಯಾ ಟುಡೇ ಮಾಧ್ಯಮದ ಜತೆ ಮಾತನಾಡಿದ ದೇಗುಲದ ಅಧ್ಯಕ್ಷ ಸತ್ಯೇಂದ್ರ ಶುಕ್ಲಾ ಅವರು, ದೇಗುಲದ ಹೊರ ಗೋಡೆಯನ್ನು ಧ್ವಂಸ ಮಾಡಿರುವ ಕುರಿತು ದೇಗುಲದ ಪೂಜಾರಿಗಳು ಮತ್ತು ಭಕ್ತರು ಕರೆ ಮಾಡಿ ನನಗೆ ತಿಳಿಸಿದರು” ಎಂದು ಹೇಳಿದ್ದಾರೆ.
ಹಿಂದೂ ಮಾನವ ಹಕ್ಕುಗಳ ನಿರ್ದೇಶಕಿಯಾಗಿರುವ ಸಾರಾ ಗೇಟ್ಸ್, “ದೇಗುಲದ ಗೋಡೆ ಹಾಳು ಮಾಡಿರುವ ಅಪರಾಧದ ರೀತಿಯ ಸಿಖ್ಸ್ ಫಾರ್ ಜಸ್ಟಿಸ್ (SFJ) ನಡೆಸುವ ರೀತಿಯಲ್ಲಿದೆ. ಇದು ಸ್ಪಷ್ಟವಾಗಿ ಆಸ್ಟ್ರೇಲಿಯಾದ ಹಿಂದೂಗಳನ್ನು ಭಯಭೀತಗೊಳಿಸಲು ಮಾಡಿರುವ ಪ್ರಯತ್ನವಾಗಿದೆ. ಪ್ರಪಗಂಡಾ, ಕಾನೂನುಬಾಹಿರ ಚಿಹ್ನೆಗಳು ಮತ್ತು ಸೈಬರ್‌ಬುಲ್ಲಿಂಗ್ ಸೇರಿದಂತೆ ಎಲ್ಲ ರೀತಿಯ ಬೆದರಿಕೆಗಳನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನಿಗಳ ದಾಳಿ ಖಂಡನೀಯ
ಕಳೆದ ಜನವರಿ ತಿಂಗಳಲ್ಲಿ ಆಸ್ಟ್ರೇಲಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯವನ್ನು ಹಿಂದೂ ವಿರೋಧಿ ಗೀಚುಬರಹದಿಂದ ಧ್ವಂಸಗೊಳಿಸಲಾಯಿತು. ಈಗ ಮತ್ತೆ ಅಂಥದ್ದೇ ಕೃತ್ಯಗಳನ್ನು ಎಸಗಲಾಗಿದೆ. ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಹಿಂದೂ ವಿರೋಧಿ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ.