ಚಂಡೀಗಢ: ಪಂಜಾಬ್‌ನಲ್ಲಿ ಖಲಿಸ್ತಾನಿ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ, ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗುತ್ತಿರುವ ‘ವಾರಿಸ್ ಪಂಜಾಬ್ ದೆ’ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್‌ನನ್ನು (Amrit Pal Singh) ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ ಸಂಜೆ ಹೇಳಲಾಗಿತ್ತು. ರಾತ್ರಿಯ ಹೊತ್ತಿಗೆ, ʼಆತ ಇನ್ನೂ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆʼ ಎಂದು ಪೊಲೀಸ್ ಅಧಿಕಾರಿಗಳು ಹೇಳೀಕೆ ನೀಡಿದರು.
ಪಂಜಾಬ್‌ನ ನಕೋಡಾರ್‌ನಲ್ಲಿ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಜಲಂಧರ್‌ಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿತ್ತು. ಈಗಾಗಲೇ ಅಮೃತ್‌ಪಾಲ್ ಸಿಂಗ್‌ನ ಆರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಲಿಸ್ತಾನಿ ನಾಯಕನಾಗಿರುವ, ಉಗ್ರರ ಜತೆ ಸಂಪರ್ಕ ಹೊಂದಿರುವ ಕುರಿತು ಶಂಕೆ ಇರುವ ಕಾರಣ ಅಮೃತ್‌ಪಾಲ್ ಸಿಂಗ್, ಕಳೆದ ಕೆಲವು ವರ್ಷಗಳಿಂದ ಪಂಜಾಬ್‌ನಲ್ಲಿ ಖಲಿಸ್ತಾನಿ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದಾನೆ. ಅದರಲ್ಲೂ, ಇತ್ತೀಚೆಗೆ ಅಮೃತ್‌ಪಾಲ್‌ನ ಸಿಂಗ್‌ನ ಆಪ್ತರನ್ನು ಬಿಡಬೇಕು ಎಂಬುದಾಗಿ ಈತನ ಆಪ್ತರು ಅಂಜಾಲ ಪೊಲೀಸ್ ಠಾಣೆಯಲ್ಲಿ ಭಾರಿ ಗಲಾಟೆ ನಡೆಸಿದ್ದರು.
ಸಿಂಗ್ ಬಂಧನಕ್ಕೆ ಪೊಲೀಸರ ಕಾರ್ಯಾಚರಣೆ
ಅಮೃತ್‌ಪಾಲ್ ಸಿಂಗ್‌ನ ಬಂಧನಕ್ಕೆ ಶನಿವಾರ ಬೆಳಗ್ಗೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಈತನ ಬಂಧನಕ್ಕಾಗಿ ಪಂಜಾಬ್ ಪೊಲೀಸರು ಹಲವು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರು. ಮೊದಲಿಗೆ ಸಿಂಗ್‌ನ ಆರು ಸಹಚರರನ್ನು ಬಂಧಿಸಿ, ನಂತರ ಸಿಂಗ್‌ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು.
ಪಂಜಾಬ್ ಪೊಲೀಸರ ಪ್ರಕಟಣೆ
“ಕೆಲವು ಆಯ್ದ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್, ಎಸ್‌ಎಂಎಸ್‌ಗಳನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಈಗಲೂ ನಿರ್ಬಂಧ ಮುಂದುವರಿದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದಿಸೆಯಲ್ಲಿ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ. ಖಲಿಸ್ತಾನದ ಬೆಂಬಲಿಗರು ಗಲಾಟೆ ಮಾಡುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2012ರಿಂದ 10 ವರ್ಷಗಳವರೆಗೆ ದುಬೈನಲ್ಲಿ ಟ್ರಾನ್ಸ್‌ಪೋರ್ಟ್ ಉದ್ಯಮದಲ್ಲಿ ತೊಡಗಿದ್ದ ಈತ, ಕಳೆದ ವರ್ಷ ಪಂಜಾಬ್‌ಗೆ ಆಗಮಿಸಿದ್ದಾನೆ ಎಂದು ತಿಳಿದುಬಂದಿದೆ. ಪಂಜಾಬ್‌ಗೆ ಆಗಮಿಸುತ್ತಲೇ ಖಲಿಸ್ತಾನ ಪರ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದ. ಈತನನ್ನು ಪಂಜಾಬ್‌ನ ಎರಡನೇ ಬಿಂದ್ರಾನ್‌ವಾಲೆ ಎಂದೇ ಹೇಳಲಾಗುತ್ತದೆ.