ನವದೆಹಲಿ: 2024ರ ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಇಂಡಿಯಾ ಕೂಟದ (India Bloc) ಪ್ರಧಾನಿ ಅಭ್ಯರ್ಥಿಯಾಗಿ (PM Candidate) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಥವಾ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರನ್ನು ಪಕ್ಷವು ಸೂಚಿಸಬಹುದು ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ಶಶಿ ತರೂರ್ (Congress Leader Shashi Tharoor)ಹೇಳಿದ್ದಾರೆ.
ಪ್ರತಿಪಕ್ಷಗಳು ಇಂಡಿಯಾ ಕೂಟದಡಿ ಒಂದಾಗಿವೆ. ಒಗ್ಗಟ್ಟಿನ ಮೂಲಕ ಚುನಾವಣೆಯನ್ನು ಎದುರಿಸಲು ಹೊರಟಿರುವ ಪರಿಣಾಮ, ಲೋಕಸಭೆ ಚುನಾವಣೆ ವೇಳೆ ಅಚ್ಚರಿಯ ಫಲಿತಾಂಶವನ್ನು ಕಾಣಬಹುದು. ಈ ಚುನಾವಣೆಯನ್ನು ವ್ಯವಸ್ಥಿವಾಗಿ ಎದುರಿಸಿದರೆ, ಖಂಡಿತವಾಗಿಯೂ ಬಿಜೆಪಿ ನೇತೃತ್ವದ ಎನ್‌ಡಿಎ ಅನ್ನು ಸೋಲಿಸುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಅಮೆರಿಕ ಮೂಲದ ಸಿಲಿಕಾನ್ ವ್ಯಾಲಿ-ಇನ್‌ಕ್ಯುಬೇಟೆಡ್ ಡಿ2ಸಿ (ಡೈರೆಕ್ಟ್-ಕನ್ಸ್ಯೂಮರ್) ಮಾರುಕಟ್ಟೆಯ Way.com ತನ್ನ ಕಚೇರಿಯನ್ನು ಆರಂಭಿಸಿತು. ಈ ವೇಳೆ, ವೃತ್ತಿಪರರೊಂದಿಗೆ ಸಂವಾದ ನಡೆಸಿದ ಶಶಿ ತರೂರ್ ಅವರು, ಈ ಎಲ್ಲ ಮಾಹಿತಿಯನ್ನು ಹಂಚಿಕೊಂಡರು ಮತ್ತು ನಾವು ಕಾದು ನೋಡಬೇಕಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Amit Shah: ಮೋದಿ ವಿರುದ್ಧ ರಾಹುಲ್ ಗಾಂಧಿ ಸಮರ್ಥ ಪ್ರಧಾನಿ ಅಭ್ಯರ್ಥಿಯೇ? ಅಮಿತ್ ಶಾ ಉತ್ತರ ಏನು?
ಇದೇ ವೇಳೆ, ಚುನಾವಣೋತ್ತರದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಶಶಿ ತರೂರ್ ಅವರು, ಫಲಿತಾಂಶ ಹೊರ ಬಂದಾಗ, ಅದು ಕೂಟದ ಫಲಿತಾಂಶವೇ ಆಗಿರುತ್ತದೆ, ಹೊರತು ಪಕ್ಷದ್ದಲ್ಲ. ಹಾಗಾಗಿ, ಆ ಎಲ್ಲ ಪಕ್ಷದ ನಾಯಕರು ಒಂದೆಡೆ ಸೇರಿ ಯಾರನ್ನಾದರೂ ಒಬ್ಬರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ನನ್ನ ಅಂದಾಜಿನ ಪ್ರಕಾರ, ಕಾಂಗ್ರೆಸ್ ಪಕ್ಷದಿಂದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಬಹುದು. ಒಂದೊಮ್ಮೆ ಹಾಗಾದರೆ, ಅವರು ದೇಶದ ಮೊದಲ ದಲಿತ ಪ್ರಧಾನಿಯಾಗಲಿದ್ದಾರೆ. ಇಲ್ಲದಿದ್ದರೆ ಈ ಕೆಲಸಕ್ಕೆ ರಾಹುಲ್ ಗಾಂಧಿ ಅವರನ್ನ ಆಯ್ಕೆ ಮಾಡಬಹುದು ಎಂದು ಹೇಳಿದರು.
ಕಾಂಗ್ರೆಸ್, ಜನತಾ ದಳ ಸಂಯುಕ್ತ, ಡಿಎಂಕೆ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಇಂಡಿಯಾ ಕೂಟವನ್ನು ರಚಿಸಿಕೊಂಡಿವೆ. ಮುಂಬರುವ ಲೋಕಸಭೆ ಎಲೆಕ್ಷನ್ ಎದುರಿಸಲಿವೆ. ಆದರೆ, ಇದವರೆಗೂ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಯಾವ ನಾಯಕನನ್ನು ಘೋಷಣೆ ಮಾಡಿಲ್ಲ. ಹಾಗಿದ್ದೂ, ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ನಿಂದಲೇ ಪ್ರಧಾನಿ ಅಭ್ಯರ್ಥಿಯಾದರೂ ಆಗಬಹುದು. ಮತ್ತೊಂದು ಮೂಲಗಳ ಪ್ರಕಾರ, ಜೆಡಿಯು ನಾಯಕ ನಿತೀಶ್ ಕುಮಾರ್, ಎನ್‌ಸಿಪಿ ನಾಯಕ ಶರದ್ ಪವಾರ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಹೆಸರೂ ಕೇಳಿ ಬರುತ್ತವೆ.