Site icon Vistara News

CWC meet : ಸಿಡಬ್ಲ್ಯುಸಿ ಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ; ಏನಂದರು ಅವರು?

Mallikarjuna Kharge

ಹೈದರಾಬಾದ್​: ಹಣದುಬ್ಬರ ಮತ್ತು ನಿರುದ್ಯೋಗದಂತಹ ಮೂಲಭೂತ ವಿಷಯಗಳ ಬಗ್ಗೆ ಮೋದಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಸಮಸ್ಯೆ ಪರಿಹಾರ ಮಾಡುವ ಬದಲು ಹೊಸ ಘೋಷಣೆಗಳನ್ನು ಹೊರಡಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಶನಿವಾರ ಆರೋಪಿಸಿದ್ದಾರೆ. ಇಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ (CWC meet) ಸಭೆಯ ಮುಂಚೂಣಿ ಭಾಷಣದಲ್ಲಿ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ

ವಿರೋಧ ಪಕ್ಷಗಳು ದೇಶ ಎದುರಿಸುವ ಸಮಸ್ಯೆಗಳ ಕುರಿತು ಪ್ರಶ್ನೆ ಎತ್ತಿದಾಗಲೆಲ್ಲಾ, ಉತ್ತರಗಳನ್ನು ನೀಡುವ ಬದಲು, ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ. ಹೊಸ ಘೋಷಣೆಗಳನ್ನು ಪ್ರಕಟಿಸುತ್ತದೆ. ಸ್ವಾವಲಂಬಿ ಭಾರತ’, ‘5 ಟ್ರಿಲಿಯನ್ ಆರ್ಥಿಕತೆ’, ‘ನವ ಭಾರತ 2022’ ಮತ್ತು ‘ಅಮೃತ್​ಕಾಲ್​ ಎಂಬ ಘೋಷಣೆಗಳನ್ನು ನೀಡುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ. ಇದೇ ವೇಳೆ ಅವರು ಇಂತಹ ಘೋಷಣೆಗಳು ದೇಶಕ್ಕೆ ಪ್ರಗತಿಯನ್ನು ತರುವುದಿಲ್ಲ ಎಂದು ಜನರಿಗೆ ವಿವರಿಸುವಂತೆ ತಮ್ಮ ಪಕ್ಷದ ನಾಯಕರಿಗೆ ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಮೋದಿ ಸರ್ಕಾರವು ‘3 ನೇ ಅತಿದೊಡ್ಡ ಆರ್ಥಿಕತೆಯ ಕನಸನ್ನು ಬಿತ್ತಲು ಆರಂಭಿಸಿದೆ. ಘೋಷಣೆಗಳ ಮೂಲಕ ದೇಶ ಪ್ರಗತಿ ಹೊಂದುವುದಿಲ್ಲ. ಇವು ವೈಫಲ್ಯಗಳನ್ನು ಮರೆಮಾಚುವ ಪ್ರಯತ್ನಗಳು ಎಂದು ನಾವು ಸಾರ್ವಜನಿಕರಿಗೆ ವಿವರಿಸಬೇಕಾಗಿದೆ. ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ವೈಫಲ್ಯಗಳ ಶಿಖರವನ್ನು ಮರೆಮಾಚಲು ಸರ್ಕಾರ ಪ್ರಯತ್ನಿಸುತ್ತಿದೆ ” ಎಂದು ಖರ್ಗೆ ಹೇಳಿದರು.

ಸಿಡಬ್ಲ್ಯುಸಿ ಪುನರ್​ರಚನೆ ಬಳಿಕ ಮೊದಲ ಸಭೆ

ಆಗಸ್ಟ್ 20 ರಂದು ಸಿಡಬ್ಲ್ಯುಸಿ ಪುನರ್ರಚನೆಯಾಗಿತ್ತು. ಆ ಬಳಿಕ ನಡೆದ ಮೊದಲ ಸಭೆ ಇದಾಗಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಖರ್ಗೆ ಹಲವಾರು ಸಮಸ್ಯೆಗಳನ್ನು ಪಟ್ಟಿ ಮಾಡಿದರು, ಜಾತಿ ಜನಗಣತಿಗೆ ಒತ್ತಾಯಿಸಿದರು ಮತ್ತು ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳನ್ನು ಪಕ್ಷಕ್ಕೆ ನೆನಪಿಸಿದರು.

ಇದೇ ವೇಳೆ ಜಿ 20 ಶೃಂಗಸಭೆಯ ಕುರಿತ ಬಿಜೆಪಿಯ ನಿರೂಪಣೆಯನ್ನೂ ಟೀಕಿಸಿದರು. ಜಿ 20 ಕಾರ್ಯಕ್ರಮದ ನಂತರ ಸರ್ಕಾರವು ತನ್ನದೇ ಆದ ಹೊಗಳಿಕೆಯಲ್ಲಿ ಮುಳುಗಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ರೊಟೇಶನ್ ಮೂಲಕ ನಡೆಯಲಿರುವ ಜಿ 20 ಸಭೆಗಾಗಿ ದೆಹಲಿಯಲ್ಲಿ 4,000 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಈಗ ಬ್ರೆಜಿಲ್ ಜಿ 20 ನಾಯಕತ್ವವನ್ನು ಪಡೆದುಕೊಂಡಿದೆ ಎಂದರು.

ಇಂಡಿಯಾ ಒಗ್ಗಟ್ಟಿಗೆ ಶ್ಲಾಘನೆ

ಈಗ 28 ಪಕ್ಷಗಳನ್ನು ಒಳಗೊಂಡಿರುವ ಪ್ರತಿಪಕ್ಷ ಪ್ರತಿಪಕ್ಷಗಳ ಒಕ್ಕೂಟ (ಇಂಡಿಯಾ) ನಡೆಸಿದ ಮೂರು ಸಭೆಗಳ ಯಶಸ್ಸನ್ನು ಖರ್ಗೆ ಇದೇ ವೇಳೆ ಶ್ಲಾಘಿಸಿದರು. ಇಂಡಿಯಾ ಬ್ಲಾಕ್​ನ ಯಶಸ್ಸನ್ನು “ಪ್ರಧಾನಿ ಮತ್ತು ಬಿಜೆಪಿ ನಾಯಕರ ದಾಳಿಯಿಂದ ಅಳೆಯಬಹುದು” ಎಂದು ಹೇಳಿದರು. ನಮ್ಮ ಯೋಜನೆಗಳು ಮುಂದುವರಿ ದಂತೆ, ಅವರ ದಾಳಿಗಳು ತೀವ್ರಗೊಳ್ಳುತ್ತವೆ ಎಂದರು.

ತೆಲಂಗಾಣ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತು ಸಿಡಬ್ಲ್ಯುಸಿ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಖರ್ಗೆ ಅವರು ಹೇಳಿದರು.

ಮಣಿಪುರ ಘರ್ಷಣೆ ಕುರಿತು ಚರ್ಚೆ

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮತ್ತು ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಗಳ ಬಗ್ಗೆಯೂ ಖರ್ಗೆ ಗಮನಸೆಳೆದರು ಮತ್ತು ದೇಶವು ಗಂಭೀರ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : CWC meet : ಒಂದು ದೇಶ ಒಂದು ಚುನಾವಣೆಗೆ ವಿರೋಧ, ಇನ್ನೇನಿವೆ ಕಾಂಗ್ರೆಸ್​ನ ಕಾರ್ಯಸೂಚಿಗಳು?

ಇಂದು ದೇಶವು ಅನೇಕ ಗಂಭೀರ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ. ಮಣಿಪುರದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಗಳಿಗೆ ಇಡೀ ಜಗತ್ತು ಸಾಕ್ಷಿಯಾಯಿತು. 3ಮೇ 2023 ರಿಂದ ಇಂದಿಗೂ ಅಲ್ಲಿ ಹಿಂಸಾಚಾರ ಮುಂದುವರೆದಿದೆ. ಮಣಿಪುರದ ಬೆಂಕಿಯನ್ನು ಹರಿಯಾಣದ ನುಹ್ ತಲುಪಲು ಮೋದಿ ಸರ್ಕಾರ ಅನುಮತಿ ನೀಡಿತು. ಹಿಂಸಾಚಾರದ ಘಟನೆಗಳು ಇಲ್ಲಿ ನಡೆದಿವೆ, ಇದರಿಂದಾಗಿ ರಾಜಸ್ಥಾನ, ಯುಪಿ ಮತ್ತು ದೆಹಲಿಯಲ್ಲಿ ಕೋಮು ಉದ್ವಿಗ್ನತೆ ಹರಡಿತು” ಎಂದು ಖರ್ಗೆ ಆರೋಪಿಸಿದರು.

ಆರ್ಥಿಕತೆ ಬಗ್ಗೆ ಕಳವಳ

ದೇಶದ ಆರ್ಥಿಕತೆಯು ದೊಡ್ಡ ಅಪಾಯದಲ್ಲಿದೆ ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ, ಹಣದುಬ್ಬರ, ದಾಖಲೆಯ ನಿರುದ್ಯೋಗ ಅಪಾಯಕಾರಿ. ಅದೇ ರೀತಿ ದೇಶದ 1% ಶ್ರೀಮಂತರು ದೇಶದ ಸಂಪತ್ತಿನ 40% ಅನ್ನು ಸಂಗ್ರಹಿಸುತ್ತಿದ್ದಾರೆ ಎಂದರು.

“ಹಣದುಬ್ಬರವು ಬಡವರು ಮತ್ತು ಸಾಮಾನ್ಯ ಜನರ ಜೀವನಕ್ಕೆ ಬೆದರಿಕೆಯಾಗಿದೆ. ಕಳೆದ 5 ವರ್ಷಗಳಲ್ಲಿ ಸಾಮಾನ್ಯ ಊಟದ ಬೆಲೆ 65% ಹೆಚ್ಚಾಗಿದೆ. 74% ಜನರು ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ. ಬೇಳೆಕಾಳುಗಳ ಬೆಲೆ ಒಂದು ವರ್ಷದಲ್ಲಿ 37% ಹೆಚ್ಚಾಗಿದೆ. ನಮ್ಮ ದೇಶದ ಜನಸಂಖ್ಯೆಯ 65% ರಷ್ಟು ಯುವಕರಿದ್ದಾರೆ. ದಾಖಲೆಯ ನಿರುದ್ಯೋಗ ದರವು ಅವರ ಕನಸುಗಳನ್ನು ನುಚ್ಚುನೂರು ಮಾಡುತ್ತಿವೆ ಎಂದರು.

ಜಾತಿ ಗಣತಿಗೆ ಒತ್ತಾಯ

ಖರ್ಗೆ ಅವರು 2011ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿಯ ದತ್ತಾಂಶವನ್ನು ಸಾರ್ವಜನಿಕಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು. 2021 ರ ಜನಗಣತಿ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇದರಿಂದ ಸಮಾಜದ ಅಗತ್ಯವಿರುವ ವರ್ಗವು ಆರೋಗ್ಯ, ಶಿಕ್ಷಣ, ಉದ್ಯೋಗ, ಆಹಾರ ಭದ್ರತೆ ಸೇರಿದಂತೆ ಇತರ ಹಕ್ಕುಗಳನ್ನು ಪಡೆಯಬಹುದು” ಎಂದು ಖರ್ಗೆ ಹೇಳಿದರು.

Exit mobile version