ನವದೆಹಲಿ: ಕುಟುಂಬಗಳ ಪ್ರಾಬಲ್ಯವಿರುವ ರಾಜಕೀಯ ಪಕ್ಷಗಳಿಗೆ ಯಾರೇ ಅಧ್ಯಕ್ಷರಾಗಲಿ, ಆದರೆ ಪಕ್ಷವನ್ನು ಮುನ್ನಡೆಸುವವರು ಕುಟುಂಬಸ್ಥರೇ ಆಗಿರುತ್ತಾರೆ. ಈ ಮಾತಿಗೆ ನಿದರ್ಶನ ಎಂಬಂತೆ, “ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಆದರೆ, ಪಕ್ಷವನ್ನು ಮುನ್ನಡೆಸುವುದು ಗಾಂಧಿ ಕುಟುಂಬವೇ” ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ (Salman Khurshid) ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್‌ಗೆ ಗಾಂಧಿ ಕುಟುಂಬವೇ ಆಧಾರ ಎಂಬುದನ್ನು ಒಪ್ಪಿಕೊಂಡಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. ಅವರು ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಆದರೆ, ನಾಯಕತ್ವ, ಪಕ್ಷ ಮುನ್ನಡೆಸುವುದು ಗಾಂಧಿ ಕುಟುಂಬವೇ ಆಗಿದೆ ಹಾಗೂ ಮುಂದಿನ ದಿನಗಳಲ್ಲಿಯೂ ಗಾಂಧಿ ಕುಟುಂಬವೇ ಆಗಿರುತ್ತದೆ” ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಖುರ್ಷಿದ್ ಅವರು ರಾಹುಲ್ ಗಾಂಧಿ ಅವರನ್ನು ಭಗವಾನ್ ಶ್ರೀರಾಮನಿಗೆ ಹೋಲಿಸಿದ್ದರು. ಇದಕ್ಕೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿತ್ತು.
ರಬ್ಬರ್ ಸ್ಟಾಂಪ್ ಅಧ್ಯಕ್ಷ ಎಂದು ಬಿಜೆಪಿ ಟೀಕೆ
ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಕುರಿತು ಸಲ್ಮಾನ್ ಖುರ್ಷಿದ್ ನೀಡಿದ ಹೇಳಿಕೆಗೆ ಬಿಜೆಪಿ ವ್ಯಂಗ್ಯ ಮಾಡಿದೆ. “ಗಾಂಧಿ ಕುಟುಂಬವೇ ಪಕ್ಷವನ್ನು ಮುನ್ನಡೆಸುವುದಾದರೆ ಮಲ್ಲಿಕಾರ್ಜುನ ಖರ್ಗೆ ಅವರು ರಬ್ಬರ್ ಸ್ಟಾಂಪ್ ಅಧ್ಯಕ್ಷರಾದಂತೆ ಅಲ್ಲವೇ” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ ಭಾಟಿಯಾ ಕುಟುಕಿದ್ದಾರೆ. “ಕಾಂಗ್ರೆಸ್ ವಂಶಾಡಳಿತದ ಮೇಲೆ ನಂಬಿಕೆ ಇರಿಸಿದ ಪಕ್ಷವಾಗಿದೆ. ಯಾರು ಅಧ್ಯಕ್ಷರಾದರೂ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೇ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಾರೆ. ಖುರ್ಷಿದ್ ಅವರ ಹೇಳಿಕೆಯನ್ನೇ ಉಲ್ಲೇಖಿಸುವುದಾದರೆ, ನಾವು ಖರ್ಗೆ ಅವರನ್ನು ರಿಮೋಟ್-ಕಂಟ್ರೋಲ್ ಅಧ್ಯಕ್ಷ ಎಂಬುದಾಗಿ ಕರೆಯಬಹುದು” ಎಂದಿದ್ದಾರೆ.
ಇದನ್ನೂ ಓದಿ | Congress BJP Spar | ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ ಕಾಂಗ್ರೆಸ್, ಹಿಂದುಗಳ ಭಾವನೆಗಳಿಗೆ ಅವಮಾನ ಎಂದ ಬಿಜೆಪಿ