ಶಿಮ್ಲಾ: ದೇಶದ ಸೈನಿಕರು, ಗಡಿ ಬಿಕ್ಕಟ್ಟು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಇತ್ತೀಚೆಗೆ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು (Kiren Rijiju At Tawang) ಭೇಟಿ ನೀಡಿದ್ದಾರೆ. ಸೈನಿಕರ ಜತೆ ಮಾತುಕತೆ, ಗಡಿಯಲ್ಲಿ ಸಂಚರಿಸಿ ಮಾಹಿತಿ ಪಡೆದ ಅವರು, “ದೇಶದ ಗಡಿ ಸುರಕ್ಷಿತವಾಗಿದೆ” ಎಂದು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ತವಾಂಗ್ ಗಡಿಯು ಸುರಕ್ಷಿತವಾಗಿದೆ. ದೇಶದ ಹೆಮ್ಮೆಯ ಯೋಧರನ್ನು ನಿಯೋಜಿಸಲಾಗಿದೆ. ಆದರೆ, ರಾಹುಲ್ ಗಾಂಧಿ ಅವರು ಸೇನೆಗೆ ಅವಮಾನಿಸುವ ಜತೆಗೆ ದೇಶದ ಘನತೆಗೆ ಧಕ್ಕೆ ತರುತ್ತಿದ್ದಾರೆ. ಅವರು ಕಾಂಗ್ರೆಸ್‌ಗೆ ಮಾತ್ರ ಸಮಸ್ಯೆಯಾಗಿಲ್ಲ, ದೇಶಕ್ಕೂ ಸಮಸ್ಯೆಯಾಗುತ್ತಿದ್ದಾರೆ. ನಮಗೆ ನಮ್ಮ ಸೇನೆಯ ಬಗ್ಗೆ ಹೆಮ್ಮೆ ಇದೆ” ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ. ಹಾಗೆಯೇ, ಗಡಿ ಭೇಟಿ ಕುರಿತು ಫೋಟೊ ಹಂಚಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಮಧ್ಯೆಯೇ ಜೈಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, “ಅರುಣಾಚಲ ಪ್ರದೇಶದ ಗಡಿಯಲ್ಲಿ ನಮ್ಮ ಯೋಧರು ಪೆಟ್ಟು ತಿನ್ನುತ್ತಿದ್ದಾರೆ. ಚೀನಾ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಗಾಢ ನಿದ್ದೆಯಲ್ಲಿದೆ” ಎಂದಿದ್ದರು. ಯೋಧರು ಚೀನಾ ಸೈನಿಕರಿಗೆ ಹೊಡೆಯುವ ವಿಡಿಯೊ ವೈರಲ್ ಆಗಿದ್ದರೂ ಸೈನಿಕರು ಪೆಟ್ಟು ತಿನ್ನುತ್ತಿದ್ದಾರೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಹಾಗಾಗಿ, ಬಿಜೆಪಿಯ ಹಲವು ನಾಯಕರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ | Rahul Gandhi On Army | ನಮ್ಮ ಸೈನಿಕರಿಗೆ ಪೆಟ್ಟು ಬೀಳುತ್ತಿವೆ, ದೇಶದ ಯೋಧರಿಗೆ ರಾಹುಲ್ ಗಾಂಧಿ ಅವಮಾನ