ನವ ದೆಹಲಿ: ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಎದುರು ಕುಳಿತು, ‘ಐಸಾ ದೇಶ್ ಹೈ ಮೇರಾ’ ಹಾಡನ್ನು ಹಾಡಿದ್ದಾರೆ. ಇದು 2004ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ ‘ವೀರ್-ಝಾರಾ’ದ ಸುಪ್ರಸಿದ್ಧ ಹಾಡು. ದೇಶಭಕ್ತಿ ಸೂಸುವ ಈ ಗೀತೆ ಎವರ್ಗ್ರೀನ್. ಪಾಕಿಸ್ತಾನಿ ಹುಡುಗಿ ಮತ್ತು ಭಾರತದ ಪೈಲಟ್ ನಡುವಿನ ಲವ್ಸ್ಟೋರಿ ಒಳಗೊಂಡಿರುವ ಸಿನಿಮಾ ವೀರ್-ಝಾರಾದಲ್ಲಿ ಹಾಡನ್ನು, ಲತಾ ಮಂಗೇಶ್ಕರ್, ಉದಿತ್ ನಾರಾಯಣ್, ಗುರುದಾಸ್ ಮನ್, ಪೃಥಾ ಮಜ್ಮುಂದಾರ್ ಹಾಡಿದ್ದಾರೆ.
ಇದೀಗ ಉದಿತ್ ನಾರಾಯಣ್ ತಮ್ಮೆದುರು ಕುಳಿತು ಹಾಡು ಹಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಕಿರಣ್ ರಿಜಿಜು ‘ಉದಿತ್ ನಾರಾಯಣ್ ಜಿ ಅವರ ರೊಮ್ಯಾಂಟಿಕ್, ಸುಮಧುರ ಗೀತೆಗಳಿಗೆ ಮಾರುಹೋಗದವರಿಲ್ಲ. ಅವರ ಧ್ವನಿಯಲ್ಲಿ ಮ್ಯಾಜಿಕ್ ಇದೆ. ಇಂದು ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು’ ಎಂದು ತಿಳಿಸಿದರು.
ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಭೇಟಿಯ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡ ಕಿರಣ್ ರಿಜಿಜು, ‘ಉದಿತ್ ನಾರಾಯಣ್ ಜೀ ಭೇಟಿ ಮಾಡಿದ್ದು ಖುಷಿಯಾಯಿತು’ ಎಂದು ಹೇಳಿದ್ದಾರೆ. ಹಾಗೇ, ಉದಿತ್ ಧ್ವನಿಯಲ್ಲಿ ಮೂಡಿ ಬಂದ ಒಂದಷ್ಟು ಹಾಡುಗಳ ಹೆಸರು ಬರೆದು, ಈ ಗೀತೆಗಳನ್ನೆಂದಿಗೂ ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಉದಿತ್ ನಾರಾಯಣ್ ಹಾಡನ್ನು ಕೇಳಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿದ್ದಕ್ಕೆ ಕಿರಣ್ ರಿಜಿಜುಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಉತ್ತರಾಧಿಕಾರಿಯನ್ನು ಶಿಫಾರಸು ಮಾಡಿ ಎಂದು ಸಿಜೆಐ ರಮಣಗೆ ಪತ್ರ ಬರೆದ ಕೇಂದ್ರ ಕಾನೂನು ಸಚಿವ