ನವದೆಹಲಿ: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (Minimum Support Price) ಕಾನೂನು ಜಾರಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪಂಜಾಬ್ ಹಾಗೂ ಹರಿಯಾಣ ರೈತರು ನಡೆಸುತ್ತಿರುವ ಪ್ರತಿಭಟನೆ (Farmers Protest) ಇನ್ನಷ್ಟು ತೀವ್ರಗೊಂಡಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ (Ramlila Maidan) ಗುರುವಾರ (ಮಾರ್ಚ್ 14) ರೈತ ಸಂಘಟನೆಗಳಿಂದ ಕಿಸಾನ್ ಮಜ್ದೂರ್ ಮಹಾಪಂಚಾಯತ್ (Kisan Mazdoor Mahapanchayat) ಸುಮಾರು 30 ಸಾವಿರಕ್ಕೂ ಅಧಿಕ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಮಹಾಪಂಚಾಯತ್ ಹಿನ್ನೆಲೆಯಲ್ಲಿ ಪಂಜಾಬ್ ಹಾಗೂ ಹರಿಯಾಣ ರೈತರು ಬುಧವಾರದಿಂದಲೇ ದೆಹಲಿಯತ್ತ ಧಾವಿಸಿದ್ದು, ಸುಮಾರು 800 ಟ್ರಕ್‌ಗಳು, ಬಸ್‌ಗಳು ಹಾಗೂ ರೈಲುಗಳ ಮೂಲಕ ಈಗಾಗಲೇ ದೆಹಲಿ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಶಾಂತಿಯುತ ಮಹಾಪಂಚಾಯತ್‌ಗಾಗಿ ಕೇಂದ್ರ ಸರ್ಕಾರವು ರಾಮಲೀಲಾ ಮೈದಾನ ಹಾಗೂ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ರೀತಿಯ ಹಿಂಸಾಚಾರಕ್ಕೆ ಆಸ್ಪದ ಕೊಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
Farmers Rise Up 🚜🌽💪
— AIKS (@KisanSabha) March 13, 2024
Against The
Corporate, Communal, Dictatorial Regime!
Kisan Mazdoor Mahapanchayat, March 14, 2024
Ramlila Maidan, Delhi pic.twitter.com/uT2gugGpYs
ರೈತರ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರುವುದು, ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದು ಸೇರಿ ಹಲವು ಉದ್ದೇಶಗಳಿಗಾಗಿ ಕಿಸಾನ್ ಮಜ್ದೂರ್ ಮಹಾಪಂಚಾಯತ್ ಆಯೋಜಿಸಲಾಗಿದೆ. ಫೆಬ್ರವರಿ 22ರಂದು ಚಂಡೀಗಢದಲ್ಲಿ ನಡೆದ ಸಭೆಯಲ್ಲಿ ಮಹಾಪಂಚಾಯತ್‌ಗೆ ಕರೆ ನೀಡಲಾಗಿದೆ. ಸುಮಾರು 37 ರೈತ ಸಂಘಟನೆಗಳು ಇರುವ ಸಂಯುಕ್ತ ಕಿಸಾನ್ ಮೋರ್ಚಾ (SKM) ಮಹಾಪಂಚಾಯತ್‌ಗೆ ಕರೆ ನೀಡಿದೆ.
ಇದನ್ನೂ ಓದಿ: Farmers protest: ಪ್ರತಿಭಟನಾನಿರತ ರೈತ ಶುಭ್ ಕರಣ್ ಸಿಂಗ್ ಮರಣೋತ್ತರ ಪರೀಕ್ಷಾ ವರದಿ ಬಹಿರಂಗ; ಸಾವಿಗೆ ಕಾರಣವಾಗಿದ್ದೇನು?
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು ಎಂಬುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಹಾಗಾಗಿ, ಕೇಂದ್ರ ಸರ್ಕಾರವು ಹಲವು ಬಾರಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದೆ. ಇದರ ಮಧ್ಯೆಯೇ, ದ್ವಿದಳ ಧಾನ್ಯಗಳು, ಜೋಳ, ಹತ್ತಿ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಹೊಸ ಸಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಹಾಗೆಯೇ, ರೈತರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಹಾಗೂ ಖರೀದಿಗಾಗಿ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಸೇರಿ ಕೇಂದ್ರ ಸರ್ಕಾರವು ರೈತರಿಗೆ ಹಲವು ಆಫರ್ ನೀಡಿತ್ತು. ಆದರೆ, ಇದನ್ನು ರೈತ ಸಂಘಟನೆಗಳು ನಿರಾಕರಿಸಿದ್ದು, ಇನ್ನಷ್ಟು ತೀವ್ರವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ