ಕೋಲ್ಕತಾ: ಕೆಕೆ ಎಂದೇ ಜನಪ್ರಿಯರಾಗಿದ್ದ ಬಾಲಿವುಡ್‌ನ ಹೆಸರಾಂತ ಗಾಯಕ ಕೃಷ್ಣ ಕುಮಾರ್ ಕುನ್ನಾಥ್, ಕೋಲ್ಕೊತಾದಲ್ಲಿ ಮಂಗಳವಾರ ರಾತ್ರಿ ಕಾನ್‌ಸರ್ಟ್ ಮುಗಿಸಿದ ಕೆಲ ಹೊತ್ತಿನಲ್ಲೇ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. 53 ವರ್ಷ ವಯಸ್ಸಿನ ಕೆಕೆ ಅವರ ದಿಢೀರ್ ಅಗಲಿಕೆ ಅವರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಅಷ್ಟೊಂದು ಸೊಗಸಾಗಿ ಸಂಗೀತಗೋಷ್ಠಿಯಲ್ಲಿ ತಮ್ಮ 90ರ ದಶಕದ ಆಲ್ಬಮ್‌ನ ಲೋಕಪ್ರಸಿದ್ಧ ಹಾಡುಗಳನ್ನು ಹಾಡಿದ ಗಾಯಕ ಕೆಲವೇ ಕ್ಷಣಗಳಲ್ಲಿ ಇಹ ಲೋಕ ತ್ಯಜಿಸಿರುವುದು ಅವರ ಅಭಿಮಾನಿಗಳಿಗೆ, ಸಂಗೀತ ಪ್ರಿಯರಿಗೆ ದಿಗ್ಭ್ರಮೆ ಮೂಡಿಸಿದೆ.
ಕೆಕೆ ಅವರು 1990ರಲ್ಲಿ ಬಿಡುಗಡೆಗೊಳಿಸಿದ್ದ ಆಲ್ಬಮ್ ಜನಪ್ರಿಯವಾಗಿತ್ತು. ಅದರದ್ದೇ ಹಾಡುಗಳನ್ನು ಕೊನೆಯ ಕಾರ್ಯಕ್ರಮದಲ್ಲೂ ಹಾಡಿದ್ದರು. ವೀಕ್ಷಕರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದರು. ಮೊಬೈಲ್ ಫೋನ್ ಗಳ ಲೈಟ್ ಉರಿಸಿ ಖುಷಿ ಪಟ್ಟಿದ್ದರು. ʻಕಲ್ ಯಾದ್ ಅಯೇಂಗೇ ಯೇ ಪಲ್ʼ (ನಾಳೆಯೂ ನೆನಪಾಗಿ ಉಳಿಯಲಿದೆ ಈ ಕ್ಷಣ) ಎನ್ನುವುದು ಅವರು ಹಾಡಿದ ಕೊನೆಯ ಹಾಡಾಗಿತ್ತು.
ಹೃದಯಾಘಾತದ ಕ್ಷಣಗಳು…
ದಕ್ಷಿಣ ಕೋಲ್ಕೊತಾದ ನಜುರುಲ್ ಮಂಚ ಸಭಾಂಗಣದಲ್ಲಿ ಮಂಗಳವಾರ ಹಿನ್ನೆಲೆ ಗಾಯಕ ಕೆಕೆ ಅವರ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾಂಗಣ ಭರ್ತಿಯಾಗಿತ್ತು. ಇಲ್ಲಿ ಹಾಡುಗಳನ್ನು ಹೇಳಿ ರಂಜಿಸಿದ್ದ ಕೆಕೆ, ಬಳಿಕ ಒಬೆರಾಯ್ ಹೋಟೆಲ್‌ಗೆ ಹಿಂತಿರುಗಿದರು. ಆಗ ಅಸ್ವಸ್ಥರಾದ ಕೆಕೆ ತಾವಿದ್ದ ಕೊಠಡಿಗೆ ತೆರಳುತ್ತಲೇ ಸೋಫಾದ ಮೇಲೆ ಕುಸಿದು ಬಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದಾರಿ ಮಧ್ಯೆ ಕೊನೆಯುಸಿರೆಳೆದರು. ಕೋಲ್ಕತ್ತಾ ಮೆಡಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಅವರು ಮೃತಪಟ್ಟಿರುವುದನ್ನು ಘೋಷಿಸಲಾಯಿತು.
ಗಾಯನದ ವೇಳೆಯೇ ಸುಸ್ತಾಗಿದ್ದರೆ?
ಕೆಲ ವರದಿಗಳ ಪ್ರಕಾರ ವೇದಿಕೆಯಲ್ಲಿ ಹಾಡುತ್ತಿರುವ ಸಂದರ್ಭದಲ್ಲಿಯೇ ಕೆಕೆ ಅವರಿಗೆ ಬಳಲಿಕೆಯ ತೊಂದರೆ ಕಾಣಿಸಿತ್ತು. ಹೋಟೆಲ್‌ಗೆ ಹೋಗುವಾಗ ಶೀತ ಆಗಿರುವುದರ ಬಗ್ಗೆ ಹೇಳಿಕೊಂಡಿದ್ದರು. ಕಾರಿಗೆ ಹತ್ತು ವೇಳೆ ಅಭಿಮಾನಿಗಳು ಸೆಲ್ಫಿ ಬಯಸಿದಾಗ ನಯವಾಗಿ ನಿರಾಕರಿಸಿದ್ದರು. ಇವತ್ತು ಯಾಕೋ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದರು. ಅಸ್ವಸ್ಥ ಕೆಕೆ ಆಸ್ಪತ್ರೆಗೆ ತಲುಪಿದಾಗ ರಾತ್ರಿ 9.45 ಆಗಿತ್ತು.
ಕೆಕೆ ಅವರ ಮುಖ, ತಲೆಗೆ ಗಾಯ
ಪೊಲೀಸರು ಕೆಕೆ ಅವರ ಸಾವನ್ನು ಅಸಹಜ ಸಾವಿನ ಪ್ರಕರಣ ಎಂದು ದಾಖಲಿಸಿದ್ದಾರೆ. ಕೆಕೆ ಅವರ ಮುಖ, ತಲೆಗೆ ಗಾಯಗಳಾಗಿದ್ದು, ಮರಣೋತ್ತರ ಪರೀಕ್ಷೆ ಬುಧವಾರ ನಡೆಯಲಿದೆ. ಗಾಯಕ ತಂಗಿದ್ದ ಹೋಟೆಲ್‌ನ ಸಿಸಿಟಿವಿಗಳನ್ನು ಪರೀಕ್ಷಿಸಲಾಗುತ್ತಿದೆ.