Site icon Vistara News

Kochi Blast: ಕೇರಳದಲ್ಲಿ ಕ್ರೈಸ್ತರ ಪ್ರಾರ್ಥನೆ ವೇಳೆ ಸ್ಫೋಟ; ಗುಜರಾತ್‌ ಮೂಲದ ಆರೋಪಿ ಬಂಧನ

Kerala Blast Case

Kochi Blast: Gujarat Native Detained In Kannur

ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕ್ರೈಸ್ತ ಸಮುದಾಯದ ಕನ್ವೆನ್ಶನ್‌ ಸೆಂಟರ್‌ನಲ್ಲಿ (Convention Centre) ಬಾಂಬ್‌ ಸ್ಫೋಟ (Kochi Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರಿಯಲ್ಲಿ ಗುಜರಾತ್‌ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಾವಿರಾರು ಕ್ರೈಸ್ತರು ಭಾನುವಾರ ಬೆಳಗ್ಗೆ (ಅಕ್ಟೋಬರ್‌ 29) ಪ್ರಾರ್ಥನೆ ಸಲ್ಲಿಸುವ ವೇಳೆ ಸುಧಾರಿತ ಸ್ಫೋಟಕ ಸಾಧನ (IED) ಮೂಲಕ ಸ್ಫೋಟಗೊಳಿಸಲಾಗಿದೆ. ಅದರಲ್ಲೂ, 9.40ರ ಸುಮಾರಿಗೆ ಟಿಫಿನ್‌ ಬಾಕ್ಸ್‌ನಲ್ಲಿ ಐಇಡಿ ಇಟ್ಟು ಮೊದಲು ಸ್ಫೋಟಿಸಲಾಗಿದೆ. ಇದಾದ ಬಳಿಕ ಹಲವು ಬಾರಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿವೆ. ಅದರಲ್ಲೂ, ರಾಷ್ಟ್ರೀಯ ಭದ್ರತಾ ದಳದ (NSG) ತಂಡವನ್ನು ಸ್ಫೋಟ ಸಂಭವಿಸಿದ ಕಲಮಶ್ಶೇರಿಗೆ ಕಳುಹಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, 40ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿಯೇ 10ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕೇರಳದಲ್ಲಿ ದಾಳಿ ನಡೆದ ಬೆನ್ನಲ್ಲೇ ಮುಂಬೈನಲ್ಲೂ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಮತ್ತೊಂದೆಡೆ, ಸುಧಾರಿತ ಸ್ಫೋಟಕಗಳ ಮೂಲಕವೇ ಸ್ಫೋಟಿಸಲಾಗಿದೆ ಎಂಬುದನ್ನು ಕೇರಳ ಪೊಲೀಸ್‌ ಮಹಾ ನಿರ್ದೇಶಕ ಡಾ.ಶೇಖ್‌ ದರ್ವೇಶ್‌ ಸಾಹೇಬ್‌ ಅವರು ಖಚಿತಪಡಿಸಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Kochi Blast: ಟಿಫಿನ್‌ ಬಾಕ್ಸ್‌ನಲ್ಲಿತ್ತು ಸುಧಾರಿತ ಸ್ಫೋಟಕ; ಸ್ಥಳಕ್ಕೆ ಎನ್‌ಐಎ ಭೇಟಿ, ಸಿಎಂಗೆ ಅಮಿತ್‌ ಶಾ ಕರೆ

ಸ್ಫೋಟದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೆಯೇ, ಘಟನೆ ಕುರಿತು ತನಿಖೆ ನಡೆಸಲು ಎನ್‌ಐಎ ಹಾಗೂ ಎನ್‌ಎಸ್‌ಜಿ ಪಡೆಗಳು ಸ್ಥಳಕ್ಕೆ ತೆರಳಲು ಅಮಿತ್‌ ಶಾ ಸೂಚನೆ ನೀಡಿದ್ದಾರೆ. ಪಿಣರಾಯಿ ವಿಜಯನ್‌ ಅವರು ಕೂಡ ದಾಳಿಯನ್ನು ಖಂಡಿಸಿದ್ದು, ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Exit mobile version