ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್ (RG Kar Medical College and Hospital) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆಯ (Kolkata Doctor Murder Case) ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು, ಭಾರತೀಯ ವೈದ್ಯಕೀಯ ಸಂಘ (Indian Medical Association) ಇಂದು (ಆಗಸ್ಟ್ 17) ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಇರಲಿದ್ದು, ಎಮರ್ಜೆನ್ಸಿ ರೋಗಿಗಳಿಗೆ ಮಾತ್ರ ಚಿಕಿತ್ಸೆ ಸಿಗಲಿದೆ. ಎಲ್ಲ ವೈದ್ಯರು ಓಪಿಡಿ ಸೇವೆಗಳಿಗೆ ಹಾಜರಾಗದೆ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಸರ್ಕಾರಿ ವೈದ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ ಎಮರ್ಜೆನ್ಸಿ ಸೇವೆಯನ್ನ ಮಾತ್ರ ನೀಡಲಿದ್ದಾರೆ.
Press Release dated 16.08.2024 pic.twitter.com/IMSIHe6WjQ
— Indian Medical Association (@IMAIndiaOrg) August 16, 2024
ಐಎಂಎ ಮುಂದಿಟ್ಟ 5 ಬೇಡಿಕೆ
ಭಾರತೀಯ ವೈದ್ಯಕೀಯ ಸಂಘ ಶುಕ್ರವಾರ 5 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದೆ.
- ವೈದ್ಯರ ಕರ್ತವ್ಯದ ಅವಧಿ ಮತ್ತು ಅವರು ಜೀವನ ರೀತಿಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಆರ್‌ಜಿ ಕರ್ ಆಸ್ಪತ್ರೆಯ ಸಂತ್ರಸ್ತೆ 36 ಗಂಟೆಗಳ ಕಾಲ ಕರ್ತವ್ಯ ನಿರ್ಶಿವಹಿಸಿದ್ದರು ಮತ್ತು ವಿಶ್ರಾಂತಿ ಪಡೆಯಲು ಅವರಿಗೆ ಸುರಕ್ಷಿತ ಸ್ಥಳಗಳ ಕೊರತೆ ಇತ್ತು. ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಆಗ್ರಹಿಸಿದೆ.
- 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ 2023ರಲ್ಲಿ ಮಾಡಿದ ತಿದ್ದುಪಡಿಗಳನ್ನು 2019ರ ಉದ್ದೇಶಿತ ಆಸ್ಪತ್ರೆ ಸಂರಕ್ಷಣಾ ಮಸೂದೆಗೆ ಸೇರಿಸಬೇಕು. ಇದರಿಂದ 25 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕಾನೂನಿಗೆ ಇನ್ನಷ್ಟು ಬಲ ತುಂಬಿದಂತಾಗುತ್ತದೆ. ಕೋವಿಡ್ -19ರ ಸಮಯದಲ್ಲಿ ಜಾರಿಗೆ ತಂದ ಸುಗ್ರೀವಾಜ್ಞೆ ಈ ಪರಿಸ್ಥಿತಿಯಲ್ಲಿ ಸೂಕ್ತವಾಗಿದೆ ಎಂದು ಐಎಂಎ ಸೂಚಿಸಿದೆ.
- ಆರ್‌ಜಿ ಕರ್ ಆಸ್ಪತ್ರೆಯ ಆವರಣದಲ್ಲಿ ನಡೆದ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಜತೆಗೆ ನಿರ್ದಿಷ್ಟ ಕಾಲಮಿತಿಯೊಳಗೆ ನಿಖರವಾದ ಮತ್ತು ವೃತ್ತಿಪರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಐಎಂಎ ಒತ್ತಾಯಿಸಿದೆ.
- ಎಲ್ಲ ಆಸ್ಪತ್ರೆಗಳ ಭದ್ರತಾ ಪ್ರೋಟೋಕಾಲ್ಗಳನ್ನು ವಿಮಾನ ನಿಲ್ದಾಣದಲ್ಲಿರುವಂತೆ ಜಾರಿಗೊಳಿಸಬೇಕು. ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸಬೇಕು. ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿಯ ನಿಯೋಜನೆ ಮುಂತಾದ ಅಗತ್ಯ ಕ್ರಮ ಜಾರಿಯಾಗಬೇಕು ಎಂದು ಮನವಿ ಮಾಡಲಾಗಿದೆ.
- ಕ್ರೌರ್ಯಕ್ಕೆ ಅನುಗುಣವಾಗಿ ದುಃಖಿತ ಕುಟುಂಬಕ್ಕೆ ಸೂಕ್ತ ಮತ್ತು ಘನತೆಯ ಪರಿಹಾರವನ್ನು ಒದಗಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಬೇಡಿಕೆ ಇಟ್ಟಿದೆ.
ಇಂದು ಲಭ್ಯವಿರುವ ಸೇವೆಗಳು
ತುರ್ತು ಚಿಕಿತ್ಸೆ, ಮೆಡಿಕಲ್ ಶಾಪ್ಸ್, ಇನ್ ಪೇಷೆಂಟ್ ಸೇವೆ, ಹೆರಿಗೆ ಮತ್ತು ಎಮರ್ಜೆನ್ಸಿ ಸರ್ಜರಿ.
ಲಭ್ಯವಿಲ್ಲದ ಸೇವೆಗಳು
ಓಪಿಡಿ, ಡಯಾಲಿಸಿಸ್, ಕ್ಲಿನಿಕ್ ಸೇವೆ, ಮಕ್ಕಳ ಓಪಿಡಿ, ಡೆಂಟಲ್ ಸರ್ವಿಸ್.
ಇದನ್ನೂ ಓದಿ: Kolkata Doctor murder case: ವೈದ್ಯೆ ಕೊಲೆ ಕೇಸ್; ಪ್ರತಿಭಟನಾಕಾರರ ಮೇಲೆ ವಾಹನ ಹರಿಸಲು ಪೊಲೀಸ್ ಯತ್ನ?