Site icon Vistara News

Kolkata Doctor Murder Case: ಜನರಲ್ಲಿ ಗೊಂದಲ ಮೂಡಿಸುವ ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ; ನಿರ್ಭಯಾ ತಾಯಿ

Kolkata Doctor Murder Case

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್‌ (RG Kar Medical College and Hospital) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಬರ್ಬರ ಕೊಲೆ (Kolkata Doctor Murder Case) ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಮಧ್ಯೆ ನಿರ್ಭಯಾ ಅವರ ತಾಯಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಕಿಡಿ ಕಾರಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಸಮರ್ಥರಾದ ಕಾರಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಿರ್ಭಯಾ 2012ರಲ್ಲಿ ನವದೆಹಲಿಯಲ್ಲಿ ಚಲಿಸುವ ಬಸ್‌ನಲ್ಲೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕ್ರೂರವಾಗಿ ಕೊಲೆಯಾಗಿದ್ದರು.

ʼʼಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದ್ದಾರೆʼʼ ಎಂದು ನಿರ್ಭಯಾ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ತಮ್ಮ ಬೆಂಬಲಿಗರೊಂದಿಗೆ ಟ್ರೈನಿ ವೈದ್ಯೆಯ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ʼʼತಮ್ಮ ಅಧಿಕಾರ ಬಳಸಿ ಅಪರಾಧಿಯ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮಮತಾ ಬ್ಯಾನರ್ಜಿ ಪ್ರತಿಭಟನೆಯ ಹೆಸರಿನಲ್ಲಿ ಜನರ ಗಮನ ಬೇರೆಡೆ ತಿರುಗಿಸಲು ಯತ್ನಿಸುತ್ತಿದ್ದಾರೆʼʼ ಎಂದು ನಿರ್ಭಯಾ ತಾಯಿ ಟೀಕಿಸಿದ್ದಾರೆ.

ನಿರ್ಭಯಾ ತಾಯಿ ಹೇಳಿದ್ದೆನು?

ʼʼಈ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕುʼʼ ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಅತ್ಯಾಚಾರ ಆರೋಪಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನೂ ಹೆಚ್ಚಿನ ಕಠಿಣ ಶಿಕ್ಷೆ ವಿಧಿಸಬೇಕು. ದೇಶದ ವಿವಿಧ ಭಾಗಗಳಲ್ಲಿ ಈಗಲೂ ಮಹಿಳೆಯರ ಮೇಲಿನ ಭೀಕರ ಅತ್ಯಾಚಾರ ಪ್ರಕರಣ ವರದಿಯಾಗುತ್ತಿರುವುದು ಕಳವಳವನ್ನುಂಟು ಮಾಡಿದೆ. ಇದರ ವಿರುದ್ಧ ಸೂಕ್ತ ಕ್ರಮ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ʼʼಕೋಲ್ಕತ್ತಾ ಮೆಡಿಕಲ್‌ ಕಾಲೇಜಿನಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದಾದರೆ ರಾಜ್ಯದ ಪರಿಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆ ಎನ್ನುವುದನ್ನು ಊಹಿಸಿʼʼ ಎಂದು ನಿರ್ಭಯಾ ತಾಯಿ ಹೇಳಿದ್ದಾರೆ.

ರಾಜ್ಯಗಳಿಗೆ ಕೇಂದ್ರದ ಸೂಚನೆ

ಕೋಲ್ಕತ್ತಾ ಟ್ರೈನಿ ವೈದ್ಯೆಯ ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಈ ಮಧ್ಯೆ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿ, ಪ್ರತಿ 2 ಗಂಟೆಗೊಮ್ಮೆ ಕಾನೂನು ಸುವ್ಯವಸ್ಥೆಯ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಗೃಹ ಸಚಿವಾಲಯ ರಾಜ್ಯಗಳ ಪೊಲೀಸ್‌ ಇಲಾಖೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ, ಪ್ರತಿ 2 ಗಂಟೆಗೊಮ್ಮೆ ಪರಿಸ್ಥಿತಿಯನ್ನು ಇಮೇಲ್‌, ಫ್ಯಾಕ್ಸ್‌ ಅಥವಾ ವ್ಯಾಟ್ಸ್‌ಆ್ಯಪ್‌ ಮೂಲಕ ತಿಳಿಸುವಂತೆ ಸೂಚಿಸಿದೆ.

“ಪಶ್ಚಿಮ ಬಂಗಾಳದ ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಹತ್ಯೆ ವಿರೋಧಿಸಿ ನಿಮ್ಮ ರಾಜ್ಯ / ಕೇಂದ್ರಾಡಳಿತ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ವರದಿಯನ್ನು ಮೇಲ್ವಿಚಾರಣೆ ಮಾಡಲು ಸಕ್ಷಮ ಪ್ರಾಧಿಕಾರ ಬಯಸಿದೆ. ಈ ನಿಟ್ಟಿನಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ನಿಮ್ಮ ವರದಿ ನಮ್ಮ ಕೈ ಸೇರಬೇಕುʼʼ ಎಂದು ಹೇಳಿದೆ.

ಇದನ್ನೂ ಓದಿ: Kolkata Doctor Murder Case: ಸಂತ್ರಸ್ತೆಯ ದೇಹದಲ್ಲಿ ಪತ್ತೆಯಾಗಿದ್ದು 150 ಗ್ರಾಂ ವೀರ್ಯವಲ್ಲ; ಸ್ಪಷ್ಟನೆ ನೀಡಿದ ವೈದ್ಯರು

Exit mobile version