ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (RG Kar Medical College and Hospital)ಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ (Kolkata Doctor Murder Case) ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ (Sanjay Roy)ನನ್ನು ಭಾನುವಾರ ಸುಳ್ಳು ಪತ್ತೆ ಪರೀಕ್ಷೆ (Polygraph test)ಗೆ ಒಳಪಡಿಸಲಾಗಿದೆ. ಈ ವೇಳೆ ಹಲವು ಆಘಾತಕಾರಿ ವಿವರಗಳು ಬಹಿರಂಗಗೊಂಡಿವೆ.
ಸುಳ್ಳು ಪತ್ತೆ ಪರೀಕ್ಷೆ ವೇಳೆ ಸಂಜಯ್ ರಾಯ್ ಸಿಬಿಐ (CBI) ಅಧಿಕಾರಿಗಳ ಮುಂದೆ ವೈದ್ಯೆಯ ಕೊಲೆಯ ಮುನ್ನ ನಗರದ ಎರಡು ವೇಶ್ಯಾಗೃಹಗಳಿಗೆ (Red light area) ಭೇಟಿ ನೀಡಿರುವುದಾಗಿ ತಿಳಿಸಿದ್ದಾನೆ. ಆದರೆ ಈ ವೇಳೆ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಹೇಳಿದ್ದಾನೆ. ಇದೇ ವೇಳೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಕಿರುಕುಳ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಜತೆಗೆ ತನ್ನ ಗೆಳತಿಗೆ ಕರೆ ಮಾಡಿ ಆಕೆಯ ನಗ್ನ ಫೋಟೊ ಕಳಿಸುವಂತೆ ಕೇಳಿದ್ದಾನೆ.
ಬೆಚ್ಚಿಬೀಳಿಸುವ ಅಂಶಗಳು
ಘಟನೆ ನಡೆದ ರಾತ್ರಿ ಸಂಜಯ್ ರಾಯ್ ತನ್ನ ಸ್ನೇಹಿತನೊಂದಿಗೆ ಮದ್ಯಪಾನ ಮಾಡಿದ್ದ. ನಂತರ ವೇಶ್ಯಾಗೃಹಕ್ಕೆ ತೆರಳಿದ್ದ. ಅಲ್ಲಿಂದ ಹೊರಬಂದ ಆತ ದಕ್ಷಿಣ ಕೋಲ್ಕತ್ತಾದ ಮತ್ತೊಂದು ರೆಡ್‌ಲೈಟ್ ಏರಿಯಾ ಚೆಟ್ಲಾಕ್ಕೆ ಭೇಟಿ ನೀಡಿದ್ದ. ಚೆಟ್ಲಾಕ್ಕೆ ತೆರಳುವ ಮಾರ್ಗಮಧ್ಯೆ ಆತ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ್ದ. ಬಳಿಕ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬಂದಿದ್ದ. ಮುಂಜಾನೆ 4 ಗಂಟೆ ಸುಮಾರಿಗೆ ಆತ ವೈದ್ಯೆ ಮೃತಪಟ್ಟ ಸೆಮಿನಾರ್ ಹಾಲ್‌ಗೆ ಪ್ರವೇಶಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಟ್ರೈನಿ ವೈದ್ಯೆಯ ಹತ್ಯೆಯ ಬಳಿಕ ಆತ ತನ್ನ ಸ್ನೇಹಿತ ಅನುಪಮ್ ದತ್ತ ಎಂಬಾತನ ಮನೆಗೆ ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅದಾಗ್ಯೂ ಸುಳ್ಳು ಪತ್ತೆ ಪರೀಕ್ಷೆ ವೇಳೆ ಸಂಜಯ್ ರಾಯ್ ಅಧಿಕಾರಿಗಳ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾನೆ ಎಂದು ವರದಿಯೊಂದು ತಿಳಿಸಿದೆ. ಇದೇ ವೇಳೆ ಸಿಬಿಐ ಅಧಿಕಾರಿಗಳು ಆತನ ಹಿನ್ನೆಲೆಯನ್ನು ಪರೀಶೀಲಿಸಿದ್ದು ಈ ವೇಳೆ ಆತ ಅಶ್ಲೀಲ ಚಿತ್ರಗಳ ವೀಕ್ಷಿಸುವ ಚಟ ಹೊಂದಿದ್ದ ಎನ್ನುವುದನ್ನು ಕಂಡುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಆತನ ಮೊಬೈಲ್ ಫೋನ್‌ನಲ್ಲಿ ಹಲವು ಅಶ್ಲೀಲ ಚಿತ್ರಗಳ ತುಣಕುಗಳು ಸಿಕ್ಕಿವೆ. ಮೃತ ವೈದ್ಯೆಯ ದೇಹದಲ್ಲಿ 25ಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿದ್ದು, ಕೊಲೆ ಮಾಡುವ ಮುನ್ನ ಕ್ರೂರವಾಗಿ ಹಿಂಸಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಆಗಸ್ಟ್ 9ರಂದು ಮುಂಜಾನೆ 4 ಗಂಟೆ ಸುಮಾರಿಗೆ ಟ್ರೈನಿ ವೈದ್ಯೆಯ ಮೃತದೇಹ ಪತ್ತೆಯಾಗಿತ್ತು. ಅಂದು ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಇಂಟರ್ನ್‌ಗಳೊಂದಿಗೆ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಉತ್ತರಗಳನ್ನು ಸಿಬಿಐ ಪರಿಶೀಲಿಸುತ್ತಿದೆ. ಸಂದೀಪ್ ಘೋಷ್ ಅವರನ್ನೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: Kolkata Doctor Murder Case: ಸುಳ್ಳು ಪತ್ತೆ ಪರೀಕ್ಷೆ ವೇಳೆ ಕೋಲ್ಕತ್ತಾ ವೈದ್ಯೆಯ ಹಂತಕ ಬಾಯ್ಬಿಟ್ಟ ರಹಸ್ಯವೇನು?