ಕೋಲ್ಕತ್ತಾ: ಭಾರತೀಯ ಕರೆನ್ಸಿ ನೋಟುಗಳನ್ನು, ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ (Subhash chandra Bose) ಭಾವಚಿತ್ರವನ್ನೂ ಮುದ್ರಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕೋಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ವಜಾ ಮಾಡಿದೆ.
94 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಹರೇನ್ ಬಾಗ್ಚಿ ಬಿಸ್ವಾಸ್ ಈ ಕುರಿತು ರ್ಜಿ ಸಲ್ಲಿಸಿದ್ದರು. ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಬೇಕು. ಮಹಾತ್ಮಾ ಗಾಂಧೀಜಿಯವರಂತೆಯೇ ಭಾರತೀಯ ಕರೆನ್ಸಿ ನೋಟುಗಳನ್ನು ಬೋಸ್ ಅವರ ಭಾವಚಿತ್ರವನ್ನೂ ಮುದ್ರಿಸಬೇಕು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಅವರ ಕೊಡುಗೆಯನ್ನು ಭಾರತ ಸರ್ಕಾರ ಗುರುತಿಸಿಲ್ಲ ಎಂದು ಆರೋಪಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ರಾಜಶ್ರೀ ಭಾರದ್ವಾಜ್ ಅವರಿದ್ದ ಪೀಠ, ಮದ್ರಾಸ್ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಕೆ.ಕೆ. ರಮೇಶ್ v/s ಭಾರತ ಸರ್ಕಾರ ಪ್ರಕರಣದ ತೀರ್ಪನ್ನು ಉಲ್ಲೇಖಿಸಿತು. ಮಹಾತ್ಮಾ ಗಾಂಧೀಜಿಯವರ ಭಾವಚಿತ್ರ ಹೊರತುಪಡಿಸಿ ಬೇರೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಹೊಂದದಿರುವ ಆರ್‌ಬಿಐ ನಿರ್ಧಾರದಲ್ಲಿ ಯಾವುದೇ ತಪ್ಪು ಕಾಣಿಸುತ್ತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು.
ಇದು ಉಳಿದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಕಡೆಗಣಿಸುವುದು ಎಂದು ಭಾವಿಸಬೇಕಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ನಮಗೆ ತಿಳಿದಿರುವ ಹಾಗೂ ತಿಳಿಯದಿರುವ ಅನೇಕರ ಕೊಡುಗೆ ಇದೆ. ಹೀಗೆಯೇ ಎಲ್ಲರೂ ಕರೆನ್ಸಿ ನೋಟಿನಲ್ಲಿ ಭಾವಚಿತ್ರ ಸೇರಿಸಬೇಕು ಎಂದು ಹೊರಟರೆ ಅದಕ್ಕೆ ಕೊನೆಯೇ ಇರುವುದಿಲ್ಲ ಎಂದು ಮದರಾಸ್ ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಲಾಗಿತ್ತು. ಮದ್ರಾಸ್ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಕೊಲ್ಕತ ಹೈಕೋರ್ಟ್, ಈ ವಿಚಾರವನ್ನು ಆರ್‌ಬಿಐ ನೇಮಿಸಿದ ಸಮಿತಿ ಈಗಾಗಲೆ ಚರ್ಚೆ ಮಾಡಿದೆ. ಅಂತಹದ್ದೇ ವಿಚಾರದಲ್ಲಿ ಮತ್ತು ವಿಚಾರಣೆ ನಡೆಸುವುದು ಸರಿ ಕಾಣುವುದಿಲ್ಲ ಎಂದು ಏಪ್ರಿಲ್ 5ರಂದು ನೀಡಿರುವ ಆದೇಶದ ಮೂಲಕ ಆರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿದೆ.