ಕೋಟಾ: ರಾಜಸ್ಥಾನದ ಕೋಚಿಂಗ್ ಹಬ್ (coaching hub) ಆಗಿರುವ ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳ (Kota suicides) ಹಿನ್ನೆಲೆ ಹಾಗೂ ಪರಿಹಾರದ ಕುರಿತು ರಚಿಸಲಾದ ಸಮಿತಿ ಹಲವು ಒತ್ತಡ ನಿವಾರಣೆ (stress relief) ಕ್ರಮಗಳನ್ನು ಸೂಚಿಸಿದೆ. ಒತ್ತಡವನ್ನು ನಿವಾರಿಸುವ ಮನೋಲ್ಲಾಸಕಾರಿ ಚಟುವಟಿಕೆಗಳ ಸೇರ್ಪಡೆ, ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೇರಣಾದಾಯಕ ವೀಡಿಯೊಗಳ ಅಪ್‌ಲೋಡ್, ಪಠ್ಯಕ್ರಮವನ್ನು ಕಡಿತ ಮಾಡಲು ಪರೀಕ್ಷಾ ತಯಾರಿ ಸಂಸ್ಥೆಗಳಿಗೆ ಸೂಚಿಸಿದೆ.
ಆತ್ಮಹತ್ಯೆಗಳ ಬಗ್ಗೆ ಪರಿಶೀಲಿಸಲು ಸೋಮವಾರ ಸಮಿತಿ ಸಭೆ ನಡೆಸಿದೆ. ಸಮಿತಿ ಮುಖ್ಯಸ್ಥರಾಗಿರುವ ರಾಜ್ಯ ಪ್ರಧಾನ ಕಾರ್ಯದರ್ಶಿ (ಉನ್ನತ ಮತ್ತು ತಾಂತ್ರಿಕ ಶಿಕ್ಷಣ) ಭವಾನಿ ಸಿಂಗ್ ದೇಥಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲಿನ ನಿರ್ದೇಶನಗಳನ್ನು ನೀಡಲಾಗಿದೆ. ಕೋಟದ ಜಿಲ್ಲಾಧಿಕಾರಿ ಓಂ ಪ್ರಕಾಶ್ ಬಂಕರ್, ಕೋಚಿಂಗ್ ಸಂಸ್ಥೆಗಳ ಪ್ರತಿನಿಧಿಗಳು, ಹಾಸ್ಟೆಲ್ ಅಸೋಸಿಯೇಶನ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ತಿಂಗಳು ದೇಥಾ ನೇತೃತ್ವದ ಸಮಿತಿ ರಚಿಸಿದ್ದಾರೆ. 15 ದಿನಗಳಲ್ಲಿ ಸಮಿತಿ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ತರಗತಿಗಳು ಮುಗಿದ ನಂತರ ಕೋಚಿಂಗ್ ಸಂಸ್ಥೆಗಳು ಮನರಂಜನೆ ಚಟುವಟಿಕೆಗಳನ್ನು ನಡೆಸುತ್ತವೆ. ವಿದ್ಯಾರ್ಥಿಗಳಿಗೆ ಬೋಧನೆ ಹೊರೆಯಾಗದಂತಿರಲು ಪ್ರೇರಕ ವೀಡಿಯೊಗಳನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಲು ಸಂಸ್ಥೆಗಳಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಪಠ್ಯಕ್ರಮ ಕಡಿಮೆ ಮಾಡಲು ಸಲಹೆ ನೀಡಲು ಪ್ರತಿ ಸಂಸ್ಥೆಯಿಂದ ವಿಷಯ ತಜ್ಞರ ಸಮಿತಿಯನ್ನು ರಚಿಸುವಂತೆ ಸಮಿತಿ ಸೂಚಿಸಿದೆ. ದುರ್ಬಲ ವಿದ್ಯಾರ್ಥಿಗಳನ್ನು ಗುರುತಿಸಲು, ಅಗತ್ಯವಿದ್ದರೆ ಯಾವುದೇ ಕ್ರಮಕ್ಕಾಗಿ ಪ್ರತಿದಿನ ಗೂಗಲ್ ಫಾರ್ಮ್‌ಗಳಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ವಿದ್ಯಾರ್ಥಿಗಳನ್ನು ಕೇಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತರಗತಿಗಳಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಳ್ಳುವ, ಪರೀಕ್ಷೆಗಳಲ್ಲಿ ಕಳಪೆ ಪ್ರದರ್ಶನ ನೀಡುವ, ತರಗತಿಗಳು ಮತ್ತು ಪರೀಕ್ಷೆಗಳನ್ನು ಬಿಟ್ಟುಬಿಡುವ ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಕೋಚಿಂಗ್ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಬಂಕರ್ ಹೇಳಿದರು. ಸಂಸ್ಥೆಗಳು ಅವರನ್ನು ಕೌನ್ಸೆಲಿಂಗ್‌ಗೆ ಕಳುಹಿಸಬೇಕಾಗುತ್ತದೆ.
ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ, ವಾರದ ಪರೀಕ್ಷೆಗೆ ಹಾಜರಾಗಿದ್ದ ಇಬ್ಬರು ವಿದ್ಯಾರ್ಥಿಗಳು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ ಕೋಟಾದಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಿಂದ ಗಮನಿಸಿದರೆ ಈ ವರ್ಷವೇ ಇಂತಹ ಸಾವುಗಳ ದಾಖಲೆ ಹೆಚ್ಚು. 23 ಸಾವುಗಳಲ್ಲಿ ಆರು ಆಗಸ್ಟ್‌ನಲ್ಲಿ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಪರೀಕ್ಷೆಗಳನ್ನು ಅಮಾನತುಗೊಳಿಸುವಂತೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳಿಗೆ ಸರ್ಕಾರ ಆದೇಶಿಸಿದೆ.
ಹೆಚ್ಚಿನ ಸಂಸ್ಥೆಗಳು ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ. ವೈಯಕ್ತಿಕವಾಗಿ ಫಲಿತಾಂಶಗಳನ್ನು ಕಳುಹಿಸಬೇಕು. ಆದರೆ ಹೆಚ್ಚಿನ ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳ ಫಲಿತಾಂಶಗಳ ಆಧಾರದ ಮೇಲೆ ತಾರತಮ್ಯ ಮಾಡುತ್ತವೆ. ಟಾಪರ್‌ಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತದೆ. ಇದು ದುರ್ಬಲ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಜಟಿಲಗೊಳಿಸುತ್ತದೆ ಎಂದು ಮನೋವೈದ್ಯ ವಿನಾಯಕ ಪಾಠಕ್ ಹೇಳಿದ್ದಾರೆ. ʼʼಕೋಚಿಂಗ್ ಸಂಸ್ಥೆಗಳಿಗೆ ಹಣದ ಮೇಲೆ ಮಾತ್ರ ಆಸಕ್ತಿ ಹೊಂದಿವೆ. ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಾರೆʼʼ ಎಂದು ರಾಜಸ್ಥಾನದ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Kota Suicides: ನೇಣು ಹಾಕಿಕೊಂಡರೆ ಕಿತ್ತು ಬರೋ ಫ್ಯಾನು, ಅಲಾರಾಂ ಸೌಂಡ್! ಆತ್ಮಹತ್ಯೆ ತಡೆಗೆ ಸೂಪರ್ ಐಡಿಯಾ