Site icon Vistara News

ಒಂದು ದೇಶ, ಒಂದು ಚುನಾವಣೆ; ದ್ರೌಪದಿ ಮುರ್ಮುಗೆ ವರದಿ ಸಲ್ಲಿಸಿದ ಸಮಿತಿ, ಮುಂದೇನು?

Droupadi Murmu

Kovind-led panel on 'one nation, one election' submits report to President Droupadi Murmu

ನವದೆಹಲಿ: ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಒಂದು ದೇಶ, ಒಂದು ಚುನಾವಣೆ )One Nation One Election) ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (Ramnath Kovind) ನೇತೃತ್ವದ ಉನ್ನತ ಮಟ್ಟದ ಸಮಿತಿಯು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ವರದಿ ಸಲ್ಲಿಸಿದೆ. ರಾಷ್ಟ್ರಪತಿ ಭವನದಲ್ಲಿ ಕೋವಿಂದ್‌ ನೇತೃತ್ವದ ಸಮಿತಿಯು ದ್ರೌಪದಿ ಮುರ್ಮು ಅವರಿಗೆ ವರದಿಯನ್ನು ಸಲ್ಲಿಸಿದೆ.

ದೇಶ ಹಾಗೂ ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ರಾಮನಾಥ್‌ ಕೋವಿಂದ್‌ ಅವರ ನೇತೃತ್ವದಲ್ಲಿ 2023ರ ಸೆಪ್ಟೆಂಬರ್‌ 2ರಂದು ಸಮಿತಿ ರಚಿಸಿದ್ದು, ಉನ್ನತ ಮಟ್ಟದ ಸಮಿತಿಯು ಈ ಕುರಿತು ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಕಳೆದ ಏಳು ತಿಂಗಳಲ್ಲಿ ನೂರಾರು ತಜ್ಞರು ಸೇರಿ ಹಲವರ ಜತೆ ಸಮಾಲೋಚಿಸಿ, ಸಂಶೋಧನೆ ನಡೆಸಿ ವರದಿಯನ್ನು ರಚಿಸಲಾಗಿದೆ. ವರದಿಯು 18,626 ಪುಟಗಳನ್ನು ಹೊಂದಿದ್ದು, ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತ ಸಾಧಕ-ಬಾಧಕಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ವರದಿಯ ಪ್ರಮುಖ ಶಿಫಾರಸುಗಳು

ಲೋಕಸಭೆ ಹಾಗೂ ಆಯಾ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದು. ಈ ಚುನಾವಣೆ ಮುಗಿದ 100 ದಿನಗಳೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂಬುದು ವರದಿಯ ಪ್ರಮುಖ ಶಿಫಾರಸುಗಳಾಗಿವೆ ಎಂದು ತಿಳಿದುಬಂದಿದೆ.

ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ರಚಿಸಿದ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜ್ಯಸಭೆಯಲ್ಲಿ ಮಾಜಿ ಪ್ರತಿಪಕ್ಷ ನಾಯಕ ಗುಲಾಮ್‌ ನಬಿ ಆಜಾದ್‌, ಹಣಕಾಸು ಆಯೋಗದ ಮಾಜಿ ಚೇರ್ಮನ್‌ ಎನ್‌.ಕೆ.ಸಿಂಗ್‌ ಹಾಗೂ ಲೋಕಸಭೆ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಶ್‌ ಸಿ. ಕಶ್ಯಪ್‌ ಅವರು ಇದ್ದಾರೆ. ದ್ರೌಪದಿ ಮುರ್ಮು ಅವರಿಗೆ ಸಮಗ್ರ ವರದಿ ಸಲ್ಲಿಸುವಾಗ ಇವರೆಲ್ಲರೂ ಉಪಸ್ಥಿತರಿದ್ದರು. ವರದಿ ತಯಾರಿಸಲು ಸಮಿತಿಯು ರಾಜಕೀಯ ಪಕ್ಷಗಳ ನಾಯಕರು, ಸಾಂವಿಧಾನಿಕ ತಜ್ಞರು, ಚುನಾವಣೆ ಆಯೋಗದ ಮಾಜಿ ಆಯುಕ್ತರು ಸೇರಿ ಹಲವರನ್ನು ಸಂಪರ್ಕಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Lok Sabha Election: ಕಾಂಗ್ರೆಸ್‌ ಬಳಿ ದುಡ್ಡಿಲ್ಲ ಎಂದ ಖರ್ಗೆ; ಚುನಾವಣೆಯಲ್ಲಿ ಪಕ್ಷದ ಗತಿ ಏನು?

ದೇಶದಲ್ಲಿ ಒಂದು ವರ್ಷದಲ್ಲಿ 200-300 ದಿನ ಚುನಾವಣೆ ನಡೆಯುತ್ತಲೇ ಇರುತ್ತವೆ. ಯಾವುದಾದರೊಂದು ಭಾಗದಲ್ಲಿ ಮತದಾನ ನಡೆಯುತ್ತಲೇ ಇರುತ್ತದೆ. ಇದರಿಂದ ಹಣ ಹಾಗೂ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ, ಲೋಕಸಭೆ ಹಾಗೂ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಚುನಾವಣೆಯು ಏಕಕಾಲಕ್ಕೆ ನಡೆಸಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯಗಳೂ ಕೇಳಿಬಂದಿವೆ. ಹಾಗಾಗಿ, ಇದರ ಕುರಿತು ವರದಿ ಸಲ್ಲಿಸಲು ಸಮಿತಿ ರಚಿಸಿದ್ದು, ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version