ವಡೋದರಾ: ಗುಜರಾತ್‌ನ 24 ವರ್ಷದ ಯುವತಿ ಕ್ಷಮಾ ಬಿಂದು (Kshama Bindu) ಕೊನೆಗೂ ತನಗೇ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ʼಅವರನ್ನೇ ಅವರು ಪ್ರೀತಿಯಿಂದ ಮದುವೆ ಮಾಡಿಕೊಂಡಿದ್ದಾರೆʼ. ಮೆಹೆಂದಿ ಸಂಭ್ರಮ, ಹಳದಿ ಶಾಸ್ತ್ರ ಸೇರಿ ಪ್ರತಿಯೊಂದೂ ಪದ್ಧತಿಗಳ ಆಚರಣೆಯೊಂದಿಗೆ ಅದ್ದೂರಿಯಾಗಿಯೇ ಸ್ವಯಂ ವಿವಾಹವಾಗಿದ್ದಾರೆ. ಕ್ಷಮಾ ಬಿಂದು ಜೂ.11 ರಂದು ಗುಜರಾತ್‌ನ ದೇವಸ್ಥಾನವೊಂದರಲ್ಲಿ ನನ್ನನ್ನು ನಾನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ಬಿಜೆಪಿ ನಾಯಕಿ ಸುನೀತಾ ಶುಕ್ಲಾ, ʼಇಂಥ ಸ್ವಯಂ ಮದುವೆಗಳಿಗೆ ನನ್ನ ವಿರೋಧವಿದೆ. ಇದರಿಂದ ಹಿಂದು ಜನಸಂಖ್ಯೆ ಕಡಿಮೆಯಾಗುತ್ತದೆ. ಕ್ಷಮಾ ಬಿಂದು ಯಾವುದೇ ದೇವಸ್ಥಾನದಲ್ಲೂ ಸ್ವಯಂ ವಿವಾಹವಾಗಲು ನಾವು ಅವಕಾಶ ಕೊಡುವುದಿಲ್ಲʼ ಎಂದು ಹೇಳಿದ್ದರು. ಇವರಷ್ಟೇ ಅಲ್ಲ, ಕಾಂಗ್ರೆಸ್‌ನ ಕೆಲವು ರಾಜಕಾರಣಿಗಳೂ ಇದನ್ನು ವಿರೋಧಿಸಿದ್ದರು. ತಮ್ಮ ಸೊಲೊಗಮಿಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಕ್ಷಮಾ ಬಿಂದು ನಿಗದಿತ ದಿನಾಂಕಕ್ಕಿಂತ ಮೊದಲೇ ವಿವಾಹವಾಗಿಬಿಟ್ಟಿದ್ದಾರೆ. ಇನ್‌ಸ್ಟಾಗ್ರಾಂಗಳಲ್ಲಿ ಸಂಭ್ರಮದ ಕ್ಷಣಗಳ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.
ʼಕೈಯಿಗೆ ಮದರಂಗಿಯ ಸುಂದರ ಚಿತ್ತಾರ, ಸ್ನೇಹಿತೆಯರೆಲ್ಲ ಸೇರಿ ನಡೆಸಿದ ಅರಿಶಿಣ ಶಾಸ್ತ್ರ, ಕ್ಷಮಾರ ಸೌಂದರ್ಯವನ್ನು ಎತ್ತಿ ಹಿಡಿದ ಶೃಂಗಾರʼಗಳನ್ನು ಆಕೆಯ ಶೇರ್ ಮಾಡಿಕೊಂಡ ಫೋಟೋದಲ್ಲಿ ನೋಡಬಹುದು. ʼಇಲ್ಲಿ ವರನೂ ಇರಬಾರದಿತ್ತಾʼ ಎಂದು ಒಂದು ಕ್ಷಣ ನೋಡುಗರ ಮನಸಲ್ಲೂ ಮೂಡುವಷ್ಟು ಅಚ್ಚುಕಟ್ಟಾಗಿ ಕ್ಷಮಾ ಬಿಂದು ವಿವಾಹ ನಡೆದಿದೆ. ಖುಷಿಯಾಗಿ, ನಗುತ್ತ ಪ್ರತಿ ಆಚರಣೆಯಲ್ಲೂ ಪಾಲ್ಗೊಂಡಿದ್ದಾರೆ. ಸಪ್ತಪದಿಯನ್ನು ಒಬ್ಬರೇ ತುಳಿದು, ತನ್ನನ್ನು ತಾನು ಸಂತೋಷವಾಗಿಟ್ಟುಕೊಳ್ಳಲು ಏಳು ಪ್ರಾಮಿಸ್‌ಗಳನ್ನೂ ಕೂಡ ತಮಗೆ ತಾವೇ ಕೊಟ್ಟುಕೊಂಡಿದ್ದಾರೆ. ಮದುವೆ ಬಳಿಕ ವಿಡಿಯೋ ಮೂಲಕ ಮಾತನಾಡಿದ ಕ್ಷಮಾ, ʼನನ್ನ ಆಯ್ಕೆ, ನನ್ನನ್ನೇ ನಾನು ಮದುವೆಯಾಗಬೇಕು ಎಂಬ ಭಾವನೆಯನ್ನು ಗೌರವಿಸಿದ, ನನ್ನ ಬೆಂಬಲಕ್ಕೆ ನಿಂತ, ಅಭಿನಂದನೆ ಸಲ್ಲಿಸಿ ಸಂದೇಶ ಕಳಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳುʼ ಎಂದು ಹೇಳಿದ್ದಾರೆ.
ಗುಜರಾತ್‌ನ ಗೋತ್ರಿ ಏರಿಯಾದಲ್ಲಿರುವ ತಮ್ಮ ಮನೆಯಲ್ಲಿಯೇ ಕ್ಷಮಾ ಮದುವೆಯಾಗಿದ್ದಾರೆ. ಸುಮಾರು 40 ನಿಮಿಷಗಳ ಕಾಲ ವಿವಾಹ ಕಾರ್ಯಕ್ರಮ ನಡೆದಿದೆ. ಇನ್ನೊಂದು ಬಹುಮುಖ್ಯ ಅಂಶವೆಂದರೆ ಪುರೋಹಿತರೂ ಇರಲಿಲ್ಲ. ಆದರೆ ಕ್ಷಮಾ ಇಚ್ಛೆಯೇ ಹಾಗಿತ್ತು. ಅವರಿಗೆ ವರನೇ ಬೇಕಾಗಿಲ್ಲ ಎಂದ ಮೇಲೆ ಪುರೋಹಿತರು ಬಂದೇನು ಮಾಡುತ್ತಾರೆ? ಇಷ್ಟೆಲ್ಲ ಆದ ಮೇಲೆ ತನ್ನನ್ನು ತಾನು ವಿವಾಹಿತ ಮಹಿಳೆ ಎಂದೇ ಕ್ಷಮಾ ಬಿಂದು ಕರೆದುಕೊಂಡಿದ್ದಾರೆ ಮತ್ತು ಹೀಗೆ ಕರೆದುಕೊಳ್ಳಲು ಸಂತೋಷವಾಗುತ್ತಿದೆ ಎಂದೂ ತಿಳಿಸಿದ್ದಾರೆ. ಹಾಗೇ, ʼನಾನು ಉಳಿದ ಯುವತಿಯರಂತೆ ಮದುವೆಯಾದ ತಕ್ಷಣ ಪತಿಯ ಮನೆಗೆ ಹೋಗಬೇಕು ಎಂದಿಲ್ಲ. ನಾನು ನನ್ನ ಅಪ್ಪ-ಅಮ್ಮನೊಟ್ಟಿಗೆ ಇದೇ ಮನೆಯಲ್ಲೇ ಇರಬಹುದುʼ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಮದುವೆ ನಂತರ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ʼನನ್ನ ಮದುವೆಗೆ ತುಂಬ ಜನ ಬಂದಿಲ್ಲ. 10 ಸ್ನೇಹಿತೆಯರು-ಸಹೋದ್ಯೋಗಿಗಳು ಬಂದಿದ್ದರು. ನನ್ನ ಸೊಲೊಗಮಿ ವಿಚಾರ ಕೇಳಿ ಈಗಾಗಲೇ ವಿವಾದ ಸೃಷ್ಟಿಯಾಗುತ್ತಿತ್ತು. ಹಾಗಾಗಿ ಮುಂಚಿತವಾಗಿಯೇ ಮದುವೆಯಾದೆ. ಆದರೂ ಮೆಹೆಂದಿ, ಅರಿಶಿಣ ಶಾಸ್ತ್ರಗಳು ನಡೆಯುತ್ತಿರುವುದು ಅಕ್ಕ-ಪಕ್ಕದ ಮನೆಯವರಿಗೆ ಗೊತ್ತಾಯಿತು. ಈ ವಿವಾಹವನ್ನು ಯಾರೆಲ್ಲಿ ತಡೆದುಬಿಡುತ್ತಾರೋ ಎಂಬ ಭಯದಿಂದ ಬೇಗನೇ ಮದುವೆಯಾದೆ. ಇದು ಭಾರತದ ಮೊದಲ ಸೊಲೊಗಮಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಾಮರಾಜಪೇಟೆ ವೃದ್ಧ ಉದ್ಯಮಿಯ ಹಂತಕ ಗುಜರಾತ್‌ನಲ್ಲಿ ಪೊಲೀಸ್ ಬಲೆಗೆ
ಹೀಗೆ ಮಹಿಳೆಯರು ತಮ್ಮನ್ನೇ ತಾನು ವಿವಾಹವಾದ ಘಟನೆಗಳು ವಿದೇಶಗಳಲ್ಲಿ ನಡೆದಿದ್ದವಾದರೂ ಭಾರತದಲ್ಲಿ ಇನ್ನೂ ಇಂಥದ್ದೆಲ್ಲ ಆಗಿರಲಿಲ್ಲ. ಇದೀಗ ಕ್ಷಮಾ ಬಿಂದು ಒಂದು ಹೊಸ ದಾಖಲೆ ಬರೆದಿದ್ದಾರೆ. ಇದು ಪಾಸಿಟಿವ್ ದಾಖಲೆಯೋ-ನೆಗೆಟಿವ್ ದಾಖಲೆಯೂ ಎಂಬ ವಾದವನ್ನು ಪಕ್ಕಕ್ಕಿಟ್ಟು ನೋಡಬೇಕು ಅಷ್ಟೇ. ಕ್ಷಮಾ ಬಿಂದು ಸೊಲೊಗಮಿ ಘೋಷಣೆ ಮಾಡಿದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆಯಾಗುತ್ತಿದೆ. ಒಂದಷ್ಟು ಜನರು ಕ್ಷಮಾ ಪರವಾಗಿ ಮಾತನಾಡುತ್ತಿದ್ದಾರೆ. ಮತ್ತೊಂದಷ್ಟು ಮಂದಿ ವಿರೋಧಿಸುತ್ತಿದ್ದಾರೆ. ಇನ್ನೂ ಒಂದು ವರ್ಗದ ಜನ ಕ್ಷಮಾರನ್ನು ಇನ್ನಿಲ್ಲದಂತೆ ಅಪಹಾಸ್ಯ ಮಾಡುತ್ತಿದ್ದಾರೆ. ಮದುವೆಯೇನೋ ಆದಿರಿ, ಲೈಂಗಿಕ ತೃಪ್ತಿಗಾಗಿ ಏನು ಮಾಡುತ್ತೀರಿ ಎಂಬಿತ್ಯಾದಿ ಕೆಟ್ಟ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ.
ಇದನ್ನೂ ಓದಿ: ತನ್ನನ್ನೇ ತಾನು ಮದುವೆ ಆಗಲಿರುವ ಯುವತಿ; ಹನಿಮೂನ್‌ಗೆ ಒಬ್ಬಳೇ ಗೋವಾಕ್ಕೆ ಹೋಗೋ ಪ್ಲ್ಯಾನ್ !