ಚಂಡಿಗಢ್: ಹರ್ಯಾಣ ಕಾಂಗ್ರೆಸ್ ಶಾಸಕರಾಗಿದ್ದ ಕುಲದೀಪ್ ಬಿಷ್ಣೋಯ್ ಇಂದು ಪಕ್ಷಕ್ಕೇ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಸ್ಪೀಕರ್ ಗ್ಯಾನ್ ಚಂದ್ ಗುಪ್ತಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ‘ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಆಡಳಿತವಿದ್ದಾಗ ಪಕ್ಷದಲ್ಲಿ ಇದ್ದ ಸಿದ್ಧಾಂತಗಳು ಈಗ ಒಂದೂ ಇಲ್ಲ. ಕಾಂಗ್ರೆಸ್ ಈಗ ಪೂರ್ತಿಯಾಗಿ ಬದಲಾಗಿದೆ’ ಎಂದು ಅವರು ಹೇಳಿದ್ದಾರೆ. ಇದೀಗ ಬಿಷ್ಣೋಯ್ ರಾಜೀನಾಮೆಯಿಂದ, ಹಿಸಾರ್ ಜಿಲ್ಲೆಯಲ್ಲಿರುವ ಅವರ ವಿಧಾನಸಭಾ ಕ್ಷೇತ್ರ ಅದಾಂಪುರಕ್ಕೆ ಮತ್ತೆ ಉಪಚುನಾವಣೆ ನಡೆಯಲಿದೆ.
ಕುಲದೀಪ್ ಬಿಷ್ಣೋಯ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದು ಖಚಿತವಾಗುತ್ತಿದ್ದಂತೆ ಅವರನ್ನು ಪಕ್ಷದ ಎಲ್ಲ ಪ್ರಮುಖ ಹುದ್ದೆಗಳಿಂದಲೂ ಉಚ್ಚಾಟನೆ ಮಾಡಲಾಗಿತ್ತು. ರಾಜ್ಯಸಭೆ ಚುನಾವಣೆಯಲ್ಲಿ ಹರ್ಯಾಣದಲ್ಲಿ ಅಜಯ್ ಮಾಕನ್ ಗೆಲ್ಲಬಹುದಾದ ಎಲ್ಲ ಲಕ್ಷಣಗಳು ಇದ್ದರೂ, ಇದೇ ಕುಲದೀಪ್ ಬಿಷ್ಣೋಯ್ ಮಾಡಿದ ಅಡ್ಡಮತದಾನದಿಂದ ಅವರು ಸೋತಿದ್ದರು. ಅಷ್ಟೇ ಅಲ್ಲ, ಆ ಬಳಿಕ ಟ್ವೀಟ್ ಮಾಡಿ, ‘ಹುತ್ತವನ್ನೇ ತುಳಿಯುವ ಸಾಮರ್ಥ್ಯ ಇರುವವನು ನಾನು. ಅಂದಮೇಲೆ, ನನ್ನನ್ನು ಹಾವಿರುವ ಅರಣ್ಯದಲ್ಲಿ ಬಿಟ್ಟು ಭಯಪಡಿಸುವ ತಂತ್ರವೇಕೆ?’ ಎಂದು ಪ್ರಶ್ನಿಸಿದ್ದರು.
ಅದಾಂಪುರದ ಕಾಂಗ್ರೆಸ್ ಶಾಸಕ ಕುಲದೀಪ್ ಬಿಷ್ಣೋಯ್ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷನ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾರ ಆಪ್ತ, ದಲಿತ ನಾಯಕ ಉದಯ್ ಭಾನ್‌ರನ್ನು ಹರಿಯಾಣ ಪ್ರದೇಶ ಸಮಿತಿ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಹೈಕಮಾಂಡ್ ನೇಮಕ ಮಾಡಿತ್ತು. ಇದಾಗಿದ್ದು ಏಪ್ರಿಲ್‌ನಲ್ಲಿ. ಆ ನೋವನ್ನು ಹಾಗೇ ಇಟ್ಟುಕೊಂಡು ಬಂದಿದ್ದ ಕುಲದೀಪ್ ಬಿಷ್ಣೋಯ್ ರಾಜ್ಯಸಭಾ ಚುನಾವಣೆಯಲ್ಲಿ ಹೊರಹಾಕಿದ್ದರು. ಸಮಯ ಸಿಕ್ಕಾಗಲೆಲ್ಲ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿದ್ದರು. ಅಷ್ಟೇ ಅಲ್ಲ, ರಾಷ್ಟ್ರಪತಿ ಚುನಾವಣೆಯಲ್ಲೂ ಇವರು ಎನ್ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಮತ ಹಾಕಿದ್ದರು.
ಕುಲದೀಪ್ ಬಿಷ್ಣೋಯ್ ಅವರು ನಾಳೆ (ಆಗಸ್ಟ್ 4) ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ತಾವು ರಾಜೀನಾಮೆ ಕೊಡುವುದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅವರು, ‘ನಾನು ರಾಜಕೀಯದಲ್ಲಿ ಹೊಸ ಪ್ರಯಾಣವನ್ನು ಶುರು ಮಾಡುವುದಕ್ಕೂ ಮೊದಲು ನನ್ನ ಬೆಂಬಲಿಗರು, ಹಿತೈಷಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಎಲ್ಲರೂ ನನಗೆ ಶುಭ ಹಾರೈಸಿದ್ದಾರೆ. ಅದಾಂಪುರ ಜನರಿಗೆ ನಾನು ಸದಾ ಆಭಾರಿಯಾಗಿರುತ್ತೇನೆ’ ಎಂದು ಹೇಳಿದ್ದರು.
ಕುಲದೀಪ್ ಬಿಷ್ಣೋಯ್ ರಾಜೀನಾಮೆ ಬಗ್ಗೆ ಹರ್ಯಾಣ ವಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯೆ ನೀಡಿದ್ದಾರೆ. ‘ಕುಲದೀಪ್ ಬಿಷ್ಣೋಯ್ ಅವರ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು. ನಿಜ ಹೇಳಬೇಕು ಎಂದರೆ ಅವರು ಯಾವಾಗ ಅಡ್ಡಮತದಾನ ಮಾಡಿದರೋ, ಅವತ್ತೇ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ನಾವಂತೂ ಉಪಚುನಾವಣೆಗೆ ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದ್ರೌಪದಿ ಮುರ್ಮುಗೆ ಮತ ಹಾಕಿದ ಕಾಂಗ್ರೆಸ್, ಎನ್‌ಸಿಪಿ, ಎಸ್‌ಪಿ ಶಾಸಕರು ಇವರು; ಆತ್ಮಸಾಕ್ಷಿಯ ಆದೇಶವಂತೆ!