ನವದೆಹಲಿ: ಖ್ಯಾತ ಬಾಣಸಿಗ ಕುನಾಲ್ ಕಪೂರ್ (Kunal Kapur) ಅವರಿಗೆ ಕೊನೆಗೂ ವಿಚ್ಛೇದನ ಲಭಿಸಿದೆ. ಪತ್ನಿಯಿಂದ ತೊಂದರೆಗೆ ಒಳಗಾಗಿದ್ದ ಕುನಾಲ್ ಕಪೂರ್ ಅವರಿಗೆ ದಿಲ್ಲಿ ಉಚ್ಚ ನ್ಯಾಯಾಲಯ (Delhi High Court)ವು ಮಂಗಳವಾರ ವಿಚ್ಛೇದನ ನೀಡಿದೆ. ಈ ಹಿಂದೆ ವಿಚ್ಛೇದನ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕುನಾಲ್ ಕಪೂರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಾರ್ವಜನಿಕವಾಗಿ ಸಂಗಾತಿಯ ವಿರುದ್ಧ ಅಜಾಗರೂಕ, ಮಾನಹಾನಿಕರ, ಅವಮಾನಕರ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದು ಕ್ರೌರ್ಯ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. “ಈ ಪ್ರಕರಣದಲ್ಲಿ ಕುನಾಲ್ ಅವರನ್ನು ಪತ್ನಿ ಸೂಕ್ತವಾಗಿ ಗೌರವಿಸದೇ ಇರುವುದು ತಿಳಿದು ಬಂದಿದೆ. ಇದು ಮದುವೆಯ ಮೂಲತತ್ವಕ್ಕೆ ಮಾಡಿದ ಅವಮಾನ. ಯಾತನೆಯನ್ನು ಸಹಿಸಿಕೊಂಡು ಬದುಕಲು ಕುನಾಲ್ ಅವರನ್ನು ಏಕೆ ಒತ್ತಾಯಿಸಬೇಕು?” ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರನ್ನೊಳಗೊಂಡ ನ್ಯಾಯಪೀಠ ಪ್ರಶ್ನಿಸಿದೆ.
ಕುನಾಲ್ ಕಪೂರ್ 2008ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2012ರಲ್ಲಿ ಈ ದಂಪತಿಗೆ ಮಗ ಜನಿಸಿದ್ದ. ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಅಡುಗೆ ಸ್ಪರ್ಧೆ ʼಮಾಸ್ಟರ್ ಶೆಫ್ ಇಂಡಿಯಾʼದ ಸೀಸನ್ 1, ಸೀಸನ್ 2, ಸೀಸನ್ 3, ಸೀಸನ್ 4, ಸೀಸನ್ 5ರ ನಿರೂಪಕ ಮತ್ತು ತೀರ್ಪುಗಾರರಾಗಿದ್ದ ಕುನಾಲ್ ಕಪೂರ್, ಈ ಹಿಂದೆ ತನ್ನ ಪತ್ನಿ ಎಂದಿಗೂ ಹೆತ್ತವರನ್ನು ಗೌರವಿಸಲಿಲ್ಲ ಎಂದು ಆರೋಪಿಸಿ ವಿಚ್ಛೇಧನಕ್ಕೆ ಕೋರ್ಟ್ ಮೆಟ್ಟಿಲೇರಿದ್ದರು. ಮತ್ತೊಂದೆಡೆ ನ್ಯಾಯಾಲಯವನ್ನು ದಾರಿ ತಪ್ಪಿಸಲು ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪತ್ನಿ ಹೇಳಿದ್ದರು. ವಿಚ್ಛೇದನ ಪಡೆಯಲ್ ಸುಳ‍್ಳು ಆರೋಪ ಹೊರಿಸಿದ್ದಾರೆ ಎಂದಿದ್ದರು.
ದೆಹಲಿಯಲ್ಲಿ 1979ರಲ್ಲಿ ಜನಿಸಿದ ಕುನಾಲ್ ಕಪೂರ್ ಮಾಸ್ಟರ್ ಶೆಫ್ ಅಮೆರಿಕ ಶೋದಲ್ಲಿ ವಿಶೇಷ ತೀರ್ಪುಗಾರರಾಗಿ ಭಾಗವಹಿಸಿ ಗಮನ ಸೆಳೆದಿದ್ದರು. ಜತೆಗೆ ಪುಸ್ತಕಗಳನ್ನೂ ಬರೆದಿದ್ದಾರೆ. ʼಕುನಾಲ್ ಕಪೂರ್ ಇನ್ ದಿ ಕಿಚನ್ʼ ಕೃತಿ 2021ರಲ್ಲಿ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಪಡೆದಿದೆ.
ಕುನಾಲ್ ಕಪೂರ್ ಹೊಸದಿಲ್ಲಿಯಲ್ಲಿ ಕಳೆದ ವರ್ಷ ನಡೆದ ಜಿ20 ಶೃಂಗಸಭೆಯಲ್ಲಿ ತಮ್ಮ ಪಾಕಶಾಲಾ ಕೌಶಲ್ಯದ ಮೂಲಕ ಅತಿಥಿಗಳಿಗೆ ರುಚಿಕರವಾದ ಭಕ್ಷ್ಯಗಳನ್ನು ಉಣಬಡಿಸಿದ್ದರು. ಭಾರತೀಯ ಪಾಕ ಪದ್ಧತಿಯನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸಿದ್ದ ಅವರು ಆ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದರು.
ಇದನ್ನೂ ಓದಿ: Alimony Case : ಗಂಡನ ತಂದೆ-ತಾಯಿ ಸೊಸೆಗೆ ಜೀವನಾಂಶ ನೀಡಬೇಕಾಗಿಲ್ಲ ಎಂದ ಹೈಕೋರ್ಟ್