ಅಗರ್ತಲಾ: ತ್ರಿಪುರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯದ ಹಲವೆಡೆ ಚುನಾವಣಾ ರ‍್ಯಾಲಿ (PM Modi Tripura Campaign) ನಡೆಸಿದ್ದಾರೆ. ಅದರಲ್ಲೂ, ಗೋಮತಿ ಜಿಲ್ಲೆಯ ರಾಧಾಕಿಶೋರ್‌ಪುರದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮೋದಿ ಅವರು ಕಾಂಗ್ರೆಸ್ ಹಾಗೂ ಸಿಪಿಎಂ ಮೈತ್ರಿಯನ್ನು ಟೀಕಿಸಿದ್ದಾರೆ. “ಕಾಂಗ್ರೆಸ್ ಹಾಗೂ ಸಿಪಿಎಂ ಕೇರಳದಲ್ಲಿ ‘ಕುಸ್ತಿ’ ಆಡುತ್ತವೆ ಹಾಗೂ ತ್ರಿಪುರದಲ್ಲಿ ‘ದೋಸ್ತಿ’ ಮಾಡಿಕೊಳ್ಳುತ್ತವೆ” ಎಂದು ವ್ಯಂಗ್ಯ ಮಾಡಿದ್ದಾರೆ.
“ತ್ರಿಪುರದಲ್ಲಿ ಹಿಂದಿನ ಸರ್ಕಾರಗಳು ಅಭಿವೃದ್ಧಿಯನ್ನು ತಡೆಹಿಡಿದಿದ್ದವು. ಸೋತು ಸುಣ್ಣವಾಗಿರುವ ಕೆಲ ಪಕ್ಷಗಳಿಗೆ ರಾಜಕೀಯ ಬದ್ಧತೆಯೂ ಇಲ್ಲ. ಕೇರಳದಲ್ಲಿ ಎರಡು ಪಕ್ಷಗಳು ಕುಸ್ತಿ ಆಡುತ್ತವೆ. ಪ್ರಬಲ ವಿರೋಧಿಗಳಂತೆ ವರ್ತಿಸುತ್ತವೆ. ಆದರೆ, ತ್ರಿಪುರದಲ್ಲಿ ಮಾತ್ರ ಭಾರಿ ದೋಸ್ತಿಗಳಂತೆ ವರ್ತಿಸುತ್ತವೆ. ಮತಗಳಿಗಾಗಿ ಈ ಪಕ್ಷಗಳು ಏನು ಬೇಕಾದರೂ ಮಾಡಲು ಸಿದ್ಧ” ಎಂದು ಕುಟುಕಿದರು.
ಇದಕ್ಕೂ ಮೊದಲು ಶನಿವಾರ ಬೆಳಗ್ಗೆ ಮೋದಿ ಅವರು ಧಲಾಯಿ ಜಿಲ್ಲೆಯ ಅಂಬಸ್ಸಾದಲ್ಲಿ ರ‍್ಯಾಲಿ ನಡೆಸಿದರು. ಅಲ್ಲಿಯೂ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದರು. ತ್ರಿಪುರದಲ್ಲಿ ಫೆಬ್ರವರಿ ೧೬ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲ ಪಕ್ಷಗಳು ಸಿದ್ಧಗೊಂಡಿದ್ದು, ಭಾರಿ ಪ್ರಚಾರ ನಡೆಸುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಸಿಪಿಎಂ ಮೈತ್ರಿ ಮಾಡಿಕೊಂಡಿವೆ. ಹಾಗಾಗಿ, ಮೋದಿ ಟೀಕಿಸಿದ್ದಾರೆ.
ಇದನ್ನೂ ಓದಿ: PM Modi Tripura Campaign: ತ್ರಿಪುರ ರಾಜ್ಯವನ್ನು ಭಯ-ಹಿಂಸಾಚಾರ ಮುಕ್ತಗೊಳಿಸಿದೆ ಬಿಜೆಪಿ ಸರ್ಕಾರ: ಪ್ರಧಾನಿ ಮೋದಿ