ನವದೆಹಲಿ: ನಕಲಿ ಸಿಮ್ ಕಾರ್ಡ್‌ಗಳ ತಡೆಗೆ ಟೆಲಿಕಮ್ಯುನಿಕೇಷನ್ಸ್ ಇಲಾಖೆ (DoT) ಮಹತ್ವದ ಹೆಜ್ಜೆ ಇರಿಸಿದೆ. ಸಿಮ್ ಕಾರ್ಡ್ ಖರೀದಿ ವೇಳೆ ಸಂಪೂರ್ಣವಾಗಿ ಡಿಜಿಟಲ್ ವೇದಿಕೆ (Digital KYC For SIM Cards) ಮೂಲಕವೇ ಕೆವೈಸಿ (KYC-Know Your Customer) ಪ್ರಕ್ರಿಯೆ ಮುಗಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲು ಚಿಂತನೆ ನಡೆಸಿದೆ. ಹಾಗೊಂದು ವೇಳೆ, ಈ ನಿಯಮಗಳು ಜಾರಿಗೆ ಬಂದರೆ, ನಕಲಿ ಸಿಮ್ ಕಾರ್ಡ್‌ಗಳ ಹಾವಳಿ ಕಡಿಮೆಯಾಗಲಿದೆ ಎಂದೇ ಹೇಳಲಾಗುತ್ತಿದೆ.
ನಕಲಿ ಸಿಮ್ ಕಾರ್ಡ್‌ಗಳ ಹಾವಳಿಯನ್ನು ತಡೆಯಲು ಟೆಲಿಕಮ್ಯುನಿಕೇಷನ್ಸ್ ಇಲಾಖೆಯು ಹಲವು ನಿಯಮಗಳನ್ನು ಬದಲಿಸಲು ಮುಂದಾಗಿದೆ. ಯಾವುದೇ ಸಿಮ್ ಕಾರ್ಡ್ ನೀಡುವಾಗ ಗ್ರಾಹಕರ ದಾಖಲೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಪರಿಶೀಲನೆ ನಡೆಸುವುದು. ಹಾಗೊಂದು ವೇಳೆ, ಅಕ್ರಮ ನಡೆದರೆ ಕಾನೂನು ಕ್ರಮ ತೆಗೆದುಕೊಳ್ಳುವುದು, ನಕಲಿ ದಾಖಲೆ ಸಲ್ಲಿಸಿದವರ ವಿರುದ್ಧ ಕಠಿಣ ಕ್ರಮ ಸೇರಿ ವಿವಿಧ ನಿಯಮಗಳ ಜಾರಿಗೆ ಮುಂದಾಗಿದೆ.
ಯಾವಾಗ ಜಾರಿ?
ಹೊಸ ಸಿಮ್ ಕಾರ್ಡ್‌ಗಳ ಖರೀದಿ ವೇಳೆ ಆನ್‌ಲೈನ್ ಮೂಲಕವೇ ಕೆವೈಸಿ ಪ್ರಕ್ರಿಯೆ ಮುಗಿಸುವ ನಿಯಮವು ಆರು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ. ಟೆಲಿಕಮ್ಯುನಿಕೇಷನ್ಸ್ ಇಲಾಖೆಯ ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ಇಂಟೆಲಿಜೆನ್ಸ್ ಯುನಿಟ್ (AI & DIU) ವಿಭಾಗಗಳ ಜತೆ ಚರ್ಚಿಸಿ ಆರ್‌ಬಿಐ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳು ಸೇರಿ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಿಯಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಒಂದು ಐಡಿಗೆ ಐದೇ ಸಿಮ್
ಇದುವರೆಗೆ ಒಂದು ಆಧಾರ್ ಕಾರ್ಡ್ ಅಥವಾ ಯಾವುದೇ ಗುರುತಿನ ಚೀಟಿ ನೀಡಿದರೆ, ಅವರಿಗೆ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತಿತ್ತು. ಆದರೆ, ಹೊಸ ನಿಯಮ ಜಾರಿಗೆ ಬಂದರೆ ಒಂದು ಐಡಿಗೆ ಕೇವಲ 5 ಸಿಮ್‌ಗಳನ್ನು ನೀಡಲಾಗುತ್ತದೆ. ನಕಲಿ ದಾಖಲೆ ಸಲ್ಲಿಸಿ, ಸಿಮ್ ಕಾರ್ಡ್ ಖರೀದಿಸಿ ಭಯೋತ್ಪಾದನೆ ಸೇರಿ ಹಲವು ದುಷ್ಕೃತ್ಯಗಳಲ್ಲಿ ಬಳಸುವ ಸಾಧ್ಯತೆ ಹೆಚ್ಚಿರುವುದರಿಂದ ಟೆಲಿಕಮ್ಯುನಿಕೇಷನ್ಸ್ ಇಲಾಖೆಯು ಕಠಿಣ ಕ್ರಮ ಜಾರಿಗೆ ತರಲು ಮುಂದಾಗಿದೆ. ಹಾಗೆಯೇ, ಗ್ರಾಹಕರ ಸುರಕ್ಷತೆಗಾಗಿ ಒಂದು ವೆಬ್ ಪೋರ್ಟಲ್‌ಅನ್ನು ಕೂಡ ರಚಿಲು ತೀರ್ಮಾನಿಸಿದೆ. ಹಾಗೆಯೇ, ಗ್ರಾಹಕರು APP ಅಥವಾ ವೆಬ್‌ಸೈಟ್‌ನಲ್ಲಿ ಮೊಬೈಲ್ ನಂಬರ್ ನಮೂದಿಸಿ, ಸ್ವಯಂ ಆಗಿ ಕೆವೈಸಿ ಮಾಡಿಕೊಳ್ಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.