ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ (Aamir Khan) ನಟಿಸಿರುವ ಲಾಲ್ ಸಿಂಗ್ ಚಡ್ಡಾ (Laal Singh Chaddha) ಸಿನಿಮಾದ ಲಾಭ-ನಷ್ಟದ ಕುರಿತು ಲೆಕ್ಕಾಚಾರ ಜೋರಾಗಿದೆ. ಸಿನಿಮಾ ಬಿಡುಗಡೆಯಾಗಿ ಒಂದು ವಾರವಾದರೂ ಬಾಕ್ಸ್ ಆಫಿಸ್‌ನಲ್ಲಿ ೫೦ ಕೋಟಿ ರೂ. ದಾಟದ ಕಾರಣ ಇದೊಂದು ಫ್ಲಾಪ್ ಸಿನಿಮಾ ಎಂದು ಎಲ್ಲರೂ ವಿಶ್ಲೇಷಿಸುತ್ತಿದ್ದಾರೆ. ನಷ್ಟ ಅನುಭವಿಸಿದ ಡಿಸ್ಟ್ರಿಬ್ಯೂಟರ್‌ಗಳಿಗೆ ಆಮಿರ್ ಖಾನ್ ಅವರೇ ಪರಿಹಾರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ಬೆನ್ನಲ್ಲೇ, “ನಮಗೇನೂ ನಷ್ಟವಾಗಿಲ್ಲ” ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೇಳಿದೆ. ಆದರೆ, ಹಣ ಗಳಿಕೆಯಲ್ಲಿ ಸಿನಿಮಾ ಹಿಂದುಳಿದ ಕಾರಣ ಆಮಿರ್ ಖಾನ್ ಹಾಗೂ ಅವರ ಕುಟುಂಬಕ್ಕೆ ಬೇಜಾರಾಗಿದೆ ಎಂದು ನಟನ ಆಪ್ತರೊಬ್ಬರು ತಿಳಿಸಿದ್ದಾರೆ. ಹಾಗಾಗಿ, ವಾಸ್ತವ ಏನು ಎಂಬ ಕುತೂಹಲ ಮೂಡಿದೆ.
ಆಮಿರ್ ಆಪ್ತ ಹೇಳುವುದೇನು?
“ಫಾರೆಸ್ಟ್ ಗಂಪ್ (Forrest Gump) ಸಿನಿಮಾವನ್ನು ಭಾರತೀಯ ವರ್ಷನ್‌ನಲ್ಲಿ ಅದ್ಭುತವಾಗಿ ಮೂಡಿಬರಲಿ ಎಂಬ ಕಾರಣಕ್ಕಾಗಿ ಆಮಿರ್ ಖಾನ್ ಅವಿರತ ಪರಿಶ್ರಮ ವಹಿಸಿದ್ದರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ, ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದೆ ಬಾಕ್ಸ್ ಆಫಿಸ್‌ನಲ್ಲಿ ಹಿನ್ನಡೆ ಅನುಭವಿಸಿರುವುದು ಅವರಿಗೆ ಬೇಸರ ತಂದಿದೆ” ಎಂದು ನಟನ ಆತ್ಮೀಯ ಸ್ನೇಹಿತರೊಬ್ಬರು ತಿಳಿಸಿದ್ದಾರೆ.
ನಿರ್ಮಾಪಕರ ಸ್ಪಷ್ಟನೆ ಏನು?
ಲಾಲ್ ಸಿಂಗ್ ಚಡ್ಡಾ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದೆ, ಇದರಿಂದ ಡಿಸ್ಟ್ರಿಬ್ಯೂಟರ್‌ಗಳು ಅಪಾರ ನಷ್ಟ ಅನುಭವಿಸಿದ್ದು, ಪರಿಹಾರ ನೀಡಬೇಕು ಎಂದು ನಿರ್ಮಾಣ ಸಂಸ್ಥೆಯಾದ ವಯಾಕಾಮ್ ೧೮ಗೆ (Viacom 18) ಒತ್ತಾಯಿಸುತ್ತಿದ್ದಾರೆ ಎಂಬ ಕುರಿತು ವರದಿಯಾದ ಕಾರಣ ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿದೆ.
“ಬೇರೆ ಡಿಸ್ಟ್ರಿಬ್ಯೂಟರ್‌ಗಳು ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡಿಲ್ಲ. ವಿ೧೮ ಸ್ಟುಡಿಯೋಸ್‌ನಿಂದ ಡಿಸ್ಟ್ರಿಬ್ಯೂಟ್ ಮಾಡಲಾಗಿದೆ. ಹಾಗಾಗಿ, ಯಾರೂ ಪರಿಹಾರ ಕೇಳುವ ಪ್ರಶ್ನೆಯೇ ಇಲ್ಲ. ಸಿನಿಮಾ ಈಗಲೂ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ನಷ್ಟ ಅನುಭವಿಸುವ ಆತಂಕವಿಲ್ಲ ಹಾಗೂ ನಷ್ಟದ ಪ್ರಶ್ನೆಯೇ ಇಲ್ಲ” ಎಂದು ತಿಳಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಸಿಗುವ ಹಣ ಹಾಗೂ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವ ಕಾರಣ ನಿರ್ಮಾಣ ಸಂಸ್ಥೆಯು ಲಾಭದ ನಿರೀಕ್ಷೆಯಲ್ಲಿದೆ ಎಂಬ ವಿವರಣೆ ನೀಡಲಾಗಿದೆ.
ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಮುನ್ನ ಹಾಗೂ ನಂತರ ಅದನ್ನು ಬಾಯ್ಕಾಟ್ ಮಾಡಬೇಕು, ನಿಷೇಧಿಸಬೇಕು ಎಂದು ಒತ್ತಾಯ ಕೇಳಿಬಂದಿದ್ದವು. ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಆದಾಗ್ಯೂ, ಸುಮಾರು ೧೮೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿ ಬಿಡುಗಡೆಯಾದ ಸಿನಿಮಾ ಒಂದು ವಾರವಾದರೂ ೫೦ ಕೋಟಿ ರೂ. ಕ್ಲಬ್ ಕೂಡ ಸೇರದಿರುವುದು ಆಮಿರ್ ಖಾನ್ ಅವರಿಗೆ ಉಂಟಾದ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದುವರೆಗೆ ಗಳಿಸಿದ್ದೆಷ್ಟು?
ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯಾಗಿ ಐದು ದಿನ ಕಳೆದು ಆರನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ ಐದು ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಕೆ ೪೬ ಕೋಟಿ ರೂ. ಎಂದು ತಿಳಿದುಬಂದಿದೆ. ಸಿನಿಮಾದ ಗಳಿಕೆ ಆಮೆಗತಿಯಲ್ಲಿರುವುದರಿಂದ ಮುಂದಿನ ವಾರವೇ ಥಿಯೇಟರ್‌ಗಳಿಂದ ತೆಗೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ವಿಸ್ತಾರ Explainer | ಆಮಿರ್ ಖಾನ್‌ನ ಲಾಲ್ ಸಿಂಗ್ ಚಡ್ಡಾಗೆ ಬಾಯ್ಕಾಟ್ ಏಕೆ?