Site icon Vistara News

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

Ishwar Sahu

Labourer Ishwar Sahu, father of youth killed by Muslim mob in a riot, defeats Congress MLA

ರಾಯ್‌ಪುರ: ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿಯ ಕೆ. ವೆಂಕಟರಮಣ ರೆಡ್ಡಿ ಅವರು ಹಾಲಿ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಹಾಗೂ ಭಾವಿ ಸಿಎಂ ರೇವಂತ್‌ ರೆಡ್ಡಿ ಅವರನ್ನು ಸೋಲಿಸಿ ಅಚ್ಚರಿ (Election Results 2023) ಮೂಡಿಸಿದಂತಹ ಫಲಿತಾಂಶವು ಛತ್ತೀಸ್‌ಗಢದಲ್ಲೂ (Chhattisgarh Assembly Election Result) ಲಭ್ಯವಾಗಿದೆ. ಉದ್ರಿಕ್ತ ಮುಸ್ಲಿಮರ ಗುಂಪಿನಿಂದ ಹತ್ಯೆಗೀಡಾಗಿದ್ದ ಯುವಕನ ತಂದೆಯು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರನ್ನು ಸೋಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಛತ್ತೀಸ್‌ಗಢದ ಸಾಜಾ ಕ್ಷೇತ್ರದಲ್ಲಿ ಬಿಜೆಪಿಯ ಈಶ್ವರ್‌ ಸಾಹು (Ishwar Sahu) ಅವರು ಕಾಂಗ್ರೆಸ್‌ನ ರವೀಂದ್ರ ಚೌಬೆ (Ravindra Choubey) ಅವರನ್ನು ಸೋಲಿಸಿದ್ದಾರೆ.

ಈಶ್ವರ್‌ ಸಾಹು ಅವರ ಕುರಿತು ಬಿಜೆಪಿ ಐಟಿ ವಿಭಾಗದ ರಾಷ್ಟ್ರೀಯ ಉಸ್ತುವಾರಿ ಅಮಿತ್‌ ಮಾಳವಿಯ ಅವರು ಮಾಹಿತಿ ನೀಡಿದ್ದಾರೆ. “ಇವರು ಈಶ್ವರ್‌ ಸಾಹು. ಕಾರ್ಮಿಕರಾಗಿದ್ದ ಇವರೀಗ ಛತ್ತೀಸ್‌ಗಢದಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರ ಮಗ ಮುಸ್ಲಿಮರಿಂದ ಹತ್ಯೆಗೀಡಾಗಿದ್ದಾನೆ. ಬಿಜೆಪಿಯು ಈಶ್ವರ್‌ ಸಾಹು ಅವರಿಗೆ ಟಿಕೆಟ್‌ ನೀಡಿತು. ಆದರೆ, ಕಾಂಗ್ರೆಸ್‌ ಕೊಲೆಗಾರರ ಪರವಾಗಿ ನಿಂತಿತು. ಆದರೂ, ಈಶ್ವರ್‌ ಸಾಹು ಅವರು ಏಳು ಬಾರಿಯ ಶಾಸಕ ರವೀಂದ್ರ ಚೌಬೆ ಅವರನ್ನು ಸೋಲಿಸಿದ್ದಾರೆ” ಎಂದು ಈಶ್ವರ್‌ ಸಾಹು ಅವರ ಫೋಟೊ ಸಮೇತ ಪೋಸ್ಟ್‌ ಮಾಡಿದ್ದಾರೆ.

ಈಶ್ವರ್‌ ಸಾಹು ಅವರು ಇದಕ್ಕೂ ಮೊದಲು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರು ಚುನಾವಣೆಯಲ್ಲಿ 1,01,789 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ ಶಾಸಕ ರವೀಂದ್ರ ಚೌಬೆ ಅವರು 96,593 ಮತಗಳನ್ನು ಪಡೆದರು. ಇದರೊಂದಿಗೆ ಈಶ್ವರ್‌ ಸಾಹು ಅವರು 5,196 ಮತಗಳಿಂದ ಗೆಲುವು ಸಾಧಿಸಿದ್ದಾರೆ. ರವೀಂದ್ರ ಚೌಬೆ ಅವರು 1985ರಿಂದ ಇದುವರೆಗೆ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಭೂಪೇಶ್‌ ಬಘೇಲ್‌ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರನ್ನು ಈಶ್ವರ್‌ ಸಾಹು ಅವರು ಸೋಲಿಸಿರುವುದು ಭಾರಿ ಸುದ್ದಿಯಾಗಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

ಈಶ್ವರ್‌ ಸಾಹು ಪುತ್ರನ ಕೊಲೆ

ಈಶ್ವರ್‌ ಸಾಹು ಅವರ ಪುತ್ರ ಭುವನೇಶ್ವರ್‌ ಸಾಹು ಅವರನ್ನು 2023ರ ಏಪ್ರಿಲ್‌ನಲ್ಲಿ ಮುಸ್ಲಿಮರ ಗುಂಪೊಂದು ಹತ್ಯೆ ಮಾಡಿದೆ. ಬೆಮೆತಾರ ಜಿಲ್ಲೆಯ ಬಿರಾನ್‌ಪುರ ಗ್ರಾಮದಲ್ಲಿ ಏಪ್ರಿಲ್‌ 8ರಂದು ನಡೆದ ಗಲಾಟೆಯ ವೇಳೆ ಮುಸ್ಲಿಮರ ಗುಂಪೊಂದು ಕತ್ತಿ, ಖಡ್ಗ ಸೇರಿ ಹಲವು ಮಾರಕಾಸ್ತ್ರಗಳಿಂದ ಕೊಚ್ಚಿ ಭುವನೇಶ್ವರ್‌ ಸಾಹು ಅವರನ್ನು ಕೊಲೆ ಮಾಡಿತ್ತು. ಇದಾದ ಬಳಿಕ ಬಿಜೆಪಿಯು ಈಶ್ವರ್‌ ಸಾಹು ಅವರಿಗೆ ಟಿಕೆಟ್‌ ನೀಡಿತ್ತು. ಚುನಾವಣೆ ವೇಳೆ ಈಶ್ವರ್‌ ಸಾಹು ಅವರು ರವೀಂದ್ರ ಚೌಬೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಅಬ್ಬರದ ಪ್ರಚಾರ ಕೈಗೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Exit mobile version