ಲಡಾಕ್: ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಲ್ಲಿ ಬಿಜೆಪಿ (Ladakh BJP) ನಾಯಕರೊಬ್ಬರ ಪುತ್ರನು ಬೌದ್ಧ ಧರ್ಮದ ಮಹಿಳೆ ಜತೆ ಓಡಿ ಹೋದ ಎಂಬ ಕಾರಣಕ್ಕಾಗಿ ತಂದೆಯನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. “ಲಡಾಕ್‌ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಪಕ್ಷದಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ” ಎಂದು ಲಡಾಕ್ ಬಿಜೆಪಿ ತಿಳಿಸಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಶೇಖ್ ನಾಸಿರ್ ಅಹ್ಮದ್ ಅವರು ಲಡಾಕ್ ಬಿಜೆಪಿ ಉಪಾಧ್ಯಕ್ಷರಾಗಿದ್ದು, ಇವರು ಲಡಾಕ್‌ನಲ್ಲಿ ಬಿಜೆಪಿ ಸಂಸ್ಥಾಪಿಸಿದವರಲ್ಲಿ ಒಬ್ಬರಾಗಿದ್ದಾರೆ. ಪಕ್ಷದಲ್ಲಿ ಇಂತಹ ಮಹತ್ವದ ಜವಾಬ್ದಾರಿ ಹೊಂದಿದ್ದರೂ ಅವರ ಪುತ್ರ ಮನ್ಸೂರ್ ಅಹ್ಮದ್ ಎಂಬಾತ ಬೌದ್ಧ ಮಹಿಳೆ ಜತೆ ಓಡಿ ಹೋಗಿ, ಮದುವೆಯಾಗಿದ್ದಕ್ಕೇ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.
“ಶೇಖ್ ನಾಸಿರ್ ಅಹ್ಮದ್ ಅವರು ಲಡಾಕ್‌ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ. ಹಾಗಾಗಿ, ಅವರನ್ನು ಕೂಡಲೇ ಜಾರಿಗೆ ಬರುವಂತೆ ಪಕ್ಷದ ಉಪಾಧ್ಯಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ” ಎಂದು ಲಡಾಕ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಕಲ್‌ಜಾಂಗ್ ಡಾರ್ಜೆ (Skalzang Dorjey) ಅವರು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಮುಸ್ಲಿಂ ವ್ಯಕ್ತಿಯೊಬ್ಬ ಬೌದ್ಧ ಧರ್ಮದ ಮಹಿಳೆ ಜತೆ ಮದುವೆಯಾಗುವುದೇ ಹೇಗೆ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ ಎಂಬ ಪ್ರಶ್ನೆ, ಟೀಕೆಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.
ಇದನ್ನೂ ಓದಿ: Indrani Tahbildar: ಬಿಜೆಪಿ ನಾಯಕಿ ಆತ್ಮಹತ್ಯೆ; ಪಕ್ಷದ ಹಿರಿಯ ನಾಯಕನ ಜತೆಗಿನ ಫೋಟೊ ಲೀಕ್ ಆಗಿದ್ದೇ ಕಾರಣ?
ಶೇಖ್ ನಾಸಿರ್ ಅಹ್ಮದ್ ಹೇಳೋದೇನು?
“ನನ್ನ ಮಗ ನಮ್ಮೆಲ್ಲರ ಇಚ್ಛೆಗೆ ವಿರುದ್ಧವಾಗಿ ಬೌದ್ಧ ಮಹಿಳೆ ಜತೆ ಓಡಿ ಹೋಗಿದ್ದಾನೆ. ಕಳೆದ ತಿಂಗಳು ಆತ ಆಕೆಯನ್ನು ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ. ನಾವು ಕೂಡ ಅವನನ್ನು ಹುಡುಕುತ್ತಿದ್ದೇವೆ” ಎಂದು ಶೇಖ್ ನಾಸಿರ್ ಅಹ್ಮದ್ ತಿಳಿಸಿದ್ದಾರೆ. “ಆತನ ಶ್ರೀನಗರದಲ್ಲಿದ್ದಾನೆ ಎಂದು ಪತ್ನಿ ಜತೆ ತೆರಳಿ ಅಲ್ಲಿ ಹುಡುಕಿದೆವು. ಆದರೆ, ಆತ ದೆಹಲಿಯಲ್ಲಿದ್ದಾನೆ ಎಂಬ ಮಾಹಿತಿ ಇದೆ. ಅವನಿಗೂ ಬಿಜೆಪಿಯಿಂದ ನೋಟಿಸ್ ನೀಡಲಾಗಿದೆ. ನಾವು ದೆಹಲಿಗೆ ಹೋಗಿ ಆತನನ್ನು ಕರೆದುಕೊಂಡು ಬರುತ್ತೇವೆ. ಇದರ ಮಧ್ಯೆಯೇ ನನ್ನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.