Site icon Vistara News

Sonam Wangchuk: 3 ಈಡಿಯಟ್ಸ್‌ ಸಿನಿಮಾಗೆ ಸ್ಫೂರ್ತಿಯಾದ ಸೋನಂ ವಾಂಗ್ಚುಕ್‌ ಗೃಹಬಂಧನ, ಏನಿದಕ್ಕೆ ಕಾರಣ?

ಲಡಾಕ್‌: ತ್ರೀ ಈಡಿಯಟ್ಸ್‌ (3 Idiots) ಸಿನಿಮಾ ನೋಡಿದವರಿಗೆ ಫುನ್ಸುಕ್‌ ವಾಂಗ್ಡು (ಆಮೀರ್‌ ಖಾನ್‌) ಪಾತ್ರ ನೆನಪಿರುತ್ತದೆ. ಹಾಗೆಯೇ, ಆಲ್‌ ಈಸ್‌ ವೆಲ್‌ (All Is Well) ಎಂಬ ಡೈಲಾಗ್‌ ಕೂಡ ಮನಸ್ಸಿನಲ್ಲಿ ಉಳಿದಿರುತ್ತದೆ. ಯಾವ ತ್ರೀ ಈಡಿಯಟ್ಸ್‌ ಸಿನಿಮಾದ ಫುನ್ಸುಕ್‌ ವಾಂಗ್ಡು ಪಾತ್ರಕ್ಕೆ ಸ್ಫೂರ್ತಿಯಾಗಿದ್ದರೋ, ಲಡಾಕ್‌ನಲ್ಲಿ ಶಿಕ್ಷಣ, ಪರಿಸರ ಪ್ರಜ್ಞೆ ಮೂಡಿಸುತ್ತಿದ್ದಾರೋ ಆ ಸೋನಂ ವಾಗ್ಚುಕ್‌ ಅವರೀಗ ಆಲ್‌ ಈಸ್‌ ನಾಟ್‌ ವೆಲ್‌ ಇನ್‌ ಲಡಾಕ್‌ ಎನ್ನುತ್ತಿದ್ದಾರೆ. ಅಲ್ಲದೆ, ಇವರ ಮೇಲೆ ಜಮ್ಮು-ಕಾಶ್ಮೀರ ಆಡಳಿತವು ಅಧಿಕಾರದ ಗುರಾಣಿ ಬಳಸಿದ್ದು, ಗೃಹಬಂಧನದಲ್ಲಿರಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ಅನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಬೇಕು, ಆ ಮೂಲಕ ಲಡಾಕ್‌ ಪರಿಸರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು, ಲಡಾಕ್‌ನಲ್ಲಿ ಗಣಿಗಾರಿಕೆ ನಿಲ್ಲಿಸಬೇಕು ಎಂದು ಸೋನಂ ವಾಂಗ್ಚುಕ್‌ ಅವರು ಗಣರಾಜ್ಯೋತ್ಸವದ ದಿನದಿಂದಲೇ ಅವರು ತಮ್ಮ ಹಿಮಾಲಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಲ್ಟರ್‌ನೇಟಿವ್‌ ಲಡಾಕ್‌ನ ಚಾವಣಿ ಮೇಲೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಹಾಗೆಯೇ, ಲಡಾಕ್‌ ದುಸ್ಥಿತಿ ಬಗ್ಗೆ, ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ ವಿಡಿಯೊ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಹಾಗೆಯೇ, ತಮ್ಮ ಸಂಸ್ಥೆಯಲ್ಲಿಯೇ ಜಮ್ಮು-ಕಾಶ್ಮೀರ ಆಡಳಿತವು ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ. ಈ ಕುರಿತು ಅವರೇ ಜಾಲತಾಣದಲ್ಲಿ ವಿಡಿಯೊ ಪೋಸ್ಟ್‌ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

“ನನ್ನ ಸಂಸ್ಥೆಯಲ್ಲಿಯೇ ಗೃಹಬಂಧನದಲ್ಲಿರಿಸಲಾಗಿದೆ. ನಾನು ಎಲ್ಲಿಗೂ ಹೋಗಲು, ಬರಲು, ಯಾವುದೇ ಚಟುವಟಿಕೆಯಲ್ಲಿ ತೊಡಗುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಪೊಲೀಸರು ನನ್ನ ಸುತ್ತ ಸುತ್ತುವರಿದಿದ್ದಾರೆ, ನನ್ನ ಸಂಸ್ಥೆ ಸುತ್ತ ಗಸ್ತು ಕಾಯುತ್ತಿದ್ದಾರೆ. ಆದರೆ, ಪೊಲೀಸರು ನನ್ನನ್ನು ಹೀಗೆ ಏಕೆ ನಿರ್ಬಂಧಿಸಲಾಗಿದೆ ಎಂಬುದು ಗೊತ್ತಿಲ್ಲ. ಕೇಳಿದರೂ ಮಾಹಿತಿ ನೀಡಿಲ್ಲ” ಎಂದು ಹೇಳಿದ್ದಾರೆ. ವಿಡಿಯೊ ಸಮೇತ ಪೊಲೀಸರ ವಾಹನಗಳು ಇರುವುದನ್ನು ಬಹಿರಂಗಪಡಿಸಿದ್ದಾರೆ.

ಕೇಂದ್ರದಿಂದ ಹುಸಿ ಭರವಸೆ

“ಲಡಾಕ್‌ನ ಮೂರನೇ ಎರಡಷ್ಟು ಪ್ರದೇಶವು ನೀರ್ಗಲ್ಲುಗಳಿಂದ ಕೂಡಿದೆ. ಗಣಿಕಾರಿಕೆಯು ಎಗ್ಗಿಲ್ಲದೆ ನಡೆಯುತ್ತಿದೆ. ಕೇಂದ್ರ ಸರ್ಕಾರವು ಕಾರ್ಪೊರೇಟ್‌ ವಿಸ್ತರಣೆ ಮಾಡುತ್ತಿದೆ. ಕೇಂದ್ರ ಸರ್ಕಾರವು 370ನೇ ವಿಧಿ ರದ್ದುಗೊಳಿಸಿದ ಬಳಿಕ ಇಲ್ಲಿನ ಯಾವುದೇ ಪರಿಸ್ಥಿತಿ ಸುಧಾರಿಸಿಲ್ಲ. 12 ಸಾವಿರ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ. ಕೇವಲ 800 ಜನರಿಗೆ ಉದ್ಯೋಗ ನೀಡಲಾಗಿದ್ದು, ಅದೂ ಪೊಲೀಸ್‌ ಹುದ್ದೆ ನೀಡಲಾಗಿದೆ. ಗಣಿಗಾರಿಕೆಯಿಂದಾಗಿ ಪರಿಸರ ಹಾಳಾಗುತ್ತಿದೆ. ವಿಧಿ ರದ್ದುಗೊಳಿಸಿದ ಬಳಿದ ಮೂರು ವರ್ಷದಲ್ಲಂತೂ ಪರಿಸ್ಥಿತಿ ಹದಗೆಟ್ಟಿದೆ” ಎಂದು ಮಾಹಿತಿ ನೀಡಿದ್ದಾರೆ.

6 ಸಾವಿರ ಕೋಟಿ ರೂ. ವ್ಯಯ ಆಗುತ್ತಿಲ್ಲ

“ಲಡಾಕ್‌ ಅಭಿವೃದ್ಧಿಗೆ ಬಜೆಟ್‌ನಲ್ಲಿ 6 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಲೆಫ್ಟಿನೆಂಟ್‌ ಗವರ್ನರ್‌ ಅವರು ಹಣ ಬಿಡುಗಡೆ ಮಾಡದ ಕಾರಣ, ಅಷ್ಟೂ ಹಣ ವಾಪಸ್‌ ಹೋಗುತ್ತಿದೆ. ಇದರಿಂದ ಅಭಿವೃದ್ಧಿ ಮರೀಚಿಕೆಯಾಗುತ್ತಿದೆ. ಆರನೇ ಪರಿಚ್ಛೇದದ ಕುರಿತು ಮಾತನಾಡುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಅಂಶಗಳು ಲಡಾಕ್‌ನಲ್ಲಿ ಮರೀಚಿಕೆಯಾಗಿವೆʼ ಎಂದು ತಿಳಿಸಿದ್ದಾರೆ.

ಮೋದಿ, ಅಮಿತ್‌ ಶಾ ಅವರೇ ಇಲ್ಲಿ ಕೇಳಿ…

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಸೋನಂ ವಾಂಗ್ಚುಕ್‌ ಅವರು ಹಲವು ಆಗ್ರಹ ಮಾಡಿದ್ದಾರೆ. “ಮೋದಿ ಅವರೇ, ಅಮಿತ್‌ ಶಾ ಅವರೇ, ನಿಮಗೆ ಇದೆಲ್ಲ ಗೊತ್ತಾಗಬೇಕು ಎಂದು ವಿಡಿಯೊ ಮಾಡಿದ್ದೇನೆ. ಲಡಾಕ್‌ ಜನ ತೊಂದರೆಗೆ ಸಿಲುಕಿದ್ದಾರೆ. ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ದಯಮಾಡಿ, ಇಲ್ಲಿನ ಸಮಸ್ಯೆ ಬಗೆಹರಿಸಿ” ಎಂದು ಆಗ್ರಹಿಸಿದ್ದಾರೆ.

ಬಾಂಡ್‌ ಕಳುಹಿಸಿದ ಲೆಫ್ಟಿನೆಂಟ್‌ ಗವರ್ನರ್‌

ಲಡಾಕ್‌ನಲ್ಲಿ ಪರಿಸರ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ಸೋನಂ ವಾಂಗ್ಚುಕ್‌ ಅವರಿಗೆ ಲೆಫ್ಟಿನೆಂಟ್‌ ಗವರ್ನರ್‌ ಅವರು ಬಾಂಡ್‌ ಕಳುಹಿಸಿದ್ದು, ಪ್ರತಿಭಟನೆ ನಡೆಸುವುದಿಲ್ಲ ಎಂಬುದಾಗಿ ಬರೆದುಕೊಡಿ ಎಂಬುದಾಗಿ ಉಲ್ಲೇಖಿಸಲಾಗಿದೆ. “ಲಡಾಕ್‌ನಲ್ಲಿ ಪ್ರತಿಭಟನೆ ನಡೆಸುವುದಿಲ್ಲ, ಜನರನ್ನು ಒಗ್ಗೂಡಿಸುವುದಿಲ್ಲ ಎಂಬುದಾಗಿ ಬರೆದಿರುವ ಬಾಂಡ್‌ ಮೇಲೆ ಸಹಿ ಹಾಕಬೇಕು” ಎಂದು ಲೆಫ್ಟಿನೆಂಟ್‌ ಗವರ್ನರ್‌ ರಾಧಾಕೃಷ್ಣ ಮಾಥುರ್‌ ಪತ್ರ ಬರೆದಿದ್ದಾರೆ ಎಂಬುದಾಗಿ ಸೋನಂ ಹೇಳಿದ್ದಾರೆ. ಹಾಗೆಯೇ, “ನಾನು ಯಾವುದೇ ಕಾರಣಕ್ಕೂ ಇದಕ್ಕೆ ಸಹಿ ಹಾಕುವುದಿಲ್ಲ. ನನ್ನನ್ನು ಜೈಲಿಗೆ ಹಾಕುತ್ತೀರಾ, ಹಾಕಿ, ತೊಂದರೆ ಇಲ್ಲ. ನಾನು ಹಿಂಜರಿಯುವುದಿಲ್ಲ” ಎಂಬುದಾಗಿ ಹೇಳಿದ್ದಾರೆ.

ಯಾರಿವರು ಸೋನಂ ವಾಂಗ್ಚುಕ್‌?

ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಸೋನಂ ವಾಂಗ್ಚುಕ್‌ ಅವರು ಲಡಾಕ್‌ನಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣರಾಗಿದ್ದಾರೆ. ತ್ರೀ ಈಡಿಯಟ್ಸ್‌ ಸಿನಿಮಾದಂತೆಯೇ, ಲಡಾಕ್‌ನ ಪರಿವರ್ತನೆಗೆ ಶ್ರಮಿಸಿದ್ದಾರೆ. ಇವರು ಹಿಮಾಲಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಲ್ಟರ್‌ನೇಟಿವ್ಸ್‌ ಲಡಾಕ್‌ (HIAL) ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಮಕ್ಕಳಿಗೆ ಕೌಶಲಾಧಾರಿತ ಶಿಕ್ಷಣ, ಸೋಲಾರ್‌ ವಿದ್ಯುತ್‌ ಬಳಕೆ ಸೇರಿ ಹಲವು ರೀತಿಯ ಬದಲಾವಣೆ ತರುತ್ತಿದ್ದಾರೆ, ಮಕ್ಕಳಿಗೆ ಜಾಗೃತಿ ಮೂಡಿಸಿದ್ದಾರೆ. ಹಾಗಾಗಿ ಇವರಿಗೆ 2018ರಲ್ಲಿ ಏಷ್ಯಾದ ನೊಬೆಲ್‌ ಎಂದೇ ಖ್ಯಾತಿಯಾದ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಲಾಗಿದೆ. ಈಗ ಲಡಾಕ್‌ ಪರಿಸರ ಸಂರಕ್ಷಣೆಗಾಗಿ ಜನವರಿ 26ರಿಂದ -20 ಡಿಗ್ರಿ ಚಳಿಯಲ್ಲೂ ಉಪವಾಸ ಆರಂಭಿಸಿದ್ದಾರೆ.

ಇದನ್ನೂ ಓದಿ: Adventure tour: ಲಡಾಕ್‌ನಲ್ಲಿ ಪ್ರವಾಸಿಗರಿಗೆ ಝಂಸ್ಕಾರ್‌ ಸಾಹಸ ಕ್ರೀಡಾ ಉತ್ಸವ!

Exit mobile version