ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತರ (chief election commissioner) ನೇಮಕ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (chief justice of India) ಹೊರಗಿಡುವ ಕುರಿತು ಬಿಜೆಪಿ ಮಂಡಿಸಿರುವ ವಿಧೇಯಕವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದ್ದು, ಹಿಂದೊಮ್ಮೆ ಭಾಜಪ ಮುಖಂಡ ಲಾಲ್‌ಕೃಷ್ಣ ಆಡ್ವಾಣಿಯವರೇ (lal krishna advani) ಬರೆದಿದ್ದ ಪತ್ರವನ್ನು ಸಮರ್ಥನೆಗೆ ಬಳಸಿಕೊಂಡಿದೆ.
ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕವನ್ನು ಪ್ರಧಾನ ಮಂತ್ರಿ, ಮುಖ್ಯ ನ್ಯಾಯಮೂರ್ತಿ ಹಾಗೂ ರಾಷ್ಟ್ರಪತಿ ಸೇರಿ ಮಾಡುತ್ತಿದ್ದರು. ಈ ತ್ರಿಸದಸ್ಯ ಸಮಿತಿಯಿಂದ ಸಿಜೆಐ ಅವರನ್ನು ವಿಧೇಯಕದ ಮೂಲಕ ಬಿಜೆಪಿ ಮುಂದಾಗಿದೆ. ಪ್ರತಿಪಕ್ಷಗಳು ಇದನ್ನು ಟೀಕಿಸಿವೆ. ಈ ನಡುವೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು 2012ರ ಬಿಜೆಪಿ ಸಂಸದೀಯ ಪತ್ರವನ್ನು ಹಂಚಿಕೊಂಡಿದ್ದಾರೆ. ಪಕ್ಷದ ಅಧ್ಯಕ್ಷ ಲಾಲ್‌ಕೃಷ್ಣ ಆಡ್ವಾಣಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿರುವ ಪತ್ರ ಇದಾಗಿದ್ದು, ಇಂತಹ ನೇಮಕಾತಿಗಳಿಗೆ ವಿಶಾಲ ತಳಹದಿಯ ಕೊಲಿಜಿಯಂ ಅನ್ನು ಸೂಚಿಸಿದ್ದರು.
ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ, ಸಂಸತ್ತಿನ ಉಭಯ ಸದನಗಳ ವಿರೋಧ ಪಕ್ಷದ ನಾಯಕರು ಮತ್ತು ಕಾನೂನು ಸಚಿವರನ್ನು ಒಳಗೊಂಡ ಐವರು ಸದಸ್ಯರ ಸಮಿತಿ ಅಥವಾ ಕೊಲಿಜಿಯಂನಿಂದ ಸಿಇಸಿ ಮತ್ತು ಇತರ ಸದಸ್ಯರನ್ನು ನೇಮಿಸಬೇಕು ಎಂದು ಅಡ್ವಾಣಿ ಪತ್ರದಲ್ಲಿ ಒತ್ತಾಯಿಸಿದ್ದರು. “ಚುನಾವಣಾ ಆಯೋಗದ ಸದಸ್ಯರನ್ನು ಪ್ರಧಾನಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುವ ಪ್ರಸ್ತುತ ವ್ಯವಸ್ಥೆಯು ಜನರಲ್ಲಿ ವಿಶ್ವಾಸವನ್ನು ಉಂಟುಮಾಡುವುದಿಲ್ಲ” ಎಂದು ಜೂನ್ 2, 2012ರಂದು ಅಡ್ವಾಣಿ ಬರೆದಿದ್ದರು.
ಈ ವಿಷಯದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನು ಪಡೆಯಲು ಸರ್ಕಾರವು ನಿರ್ಧರಿಸಿತ್ತು. ಚುನಾವಣಾ ಸುಧಾರಣೆಗಳ ಭಾಗವಾಗಿ ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಬದಲಾವಣೆಗಳಿಗೆ ಮುಕ್ತವಾಗಿದೆ ಎಂದು ಮನಮೋಹನ್ ಸಿಂಗ್ ನಂತರ ಹೇಳಿದ್ದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಮಸೂದೆಯು ಆಡ್ವಾಣಿ ಪ್ರಸ್ತಾಪಿಸಿದ್ದಕ್ಕೆ ವಿರುದ್ಧವಾಗಿರುವುದು ಮಾತ್ರವಲ್ಲದೆ ಮಾರ್ಚ್ 2, 2023ರಂದು 5 ನ್ಯಾಯಾಧೀಶರ ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ಉಲ್ಲಂಘಿಸಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಸರ್ಕಾರ ತಂದಿರುವ ವಿಧೇಯಕದ ಪ್ರಕಾರ ಯೋಜಿತ ತ್ರಿಸದಸ್ಯರ ಸಮಿತಿಯಲ್ಲಿ ಸಿಜೆಐ ಇರುವುದಿಲ್ಲ; ಬದಲಾಗಿ ಅಧ್ಯಕ್ಷರಾಗಿ ಪ್ರಧಾನಿ, ಸದಸ್ಯರಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಥವಾ ಅತಿದೊಡ್ಡ ಪಕ್ಷದ ನಾಯಕ, ಪ್ರಧಾನಿಯಿಂದ ನಾಮನಿರ್ದೇಶನಗೊಳ್ಳುವ ಕ್ಯಾಬಿನೆಟ್ ಮಂತ್ರಿ ಇರುತ್ತಾರೆ.
ʼʼಆದರೆ ಇದು ಸಮಿತಿಯಲ್ಲಿ ಆಡಳಿತ ಪಕ್ಷದ ಪ್ರಾಬಲ್ಯವನ್ನು ಉಂಟುಮಾಡುತ್ತದೆ. ಚುನಾವಣಾ ವರ್ಷದಲ್ಲಿ ಇದು ಚುನಾವಣಾ ಆಯೋಗದ ಮೇಲೆ ನಿಯಂತ್ರಣ ಪಡೆಯಲು ಮೋದಿ ನಡೆಸುತ್ತಿರರುವ ಯತ್ನʼ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚುನಾವಣೆ ಆಯುಕ್ತರ ನೇಮಕ: ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ