ನವ ದೆಹಲಿ: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರನ್ನು ಮದುವೆಯಾಗುವುದು ಖಚಿತ ಪಟ್ಟಿದೆ.
ಈ ವಿಷಯವನ್ನು ಲಲಿತ್ ಮೋದಿಯವರೇ ಟ್ವಿಟ್ಟರ್‌ನಲ್ಲಿ ಖಚಿತ ಪಡಿಸಿದ್ದಾರೆ. ಇಬ್ಬರೂ ಒಟ್ಟಿಗೇ ಪ್ರವಾಸ ಕೈಗೊಂಡಿದ್ದು, ಮಾಲ್ಡೀವ್ಸ್‌ನಲ್ಲಿ ಕಳೆದ ರಸಮಯ ಸಮಯದ ಚಿತ್ರಗಳನ್ನು ಲಲಿತ್ ಮೋದಿಯವರೇ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಸುಷ್ಮಿತಾ ಸೇನ್ ಅವರನ್ನು ಬಾಳ ಸಂಗಾತಿ ಎಂದು ಕರೆದಿದ್ದರು. ಹೊಸ ಜೀವನ ನವ ಆರಂಭ ಎಂದು ಬರೆದುಕೊಂಡಿದ್ದರು.
ಹೀಗಾಗಿ ಇವರಿಬ್ಬರೂ ಗೌಪ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಡಿದ್ದು, ಕೂಡಲೇ ಈ ಕುರಿತು ಟ್ವಿಟ್ಟರ್‌ನಲ್ಲಿಯೇ ಸ್ಪಷ್ಟನೆ ನೀಡಿರುವ ಲಲಿತ್ ಮೋದಿ, ʼʼ ನಾವಿಬ್ಬರೂ ಇನ್ನೂ ಮದುವೆಯಾಗಿಲ್ಲ, ಒಟ್ಟಿಗೇ ಓಡಾಡುತ್ತಿದ್ದೇವೆ. ಮುಂದೊಂದು ದಿನ ಅದೂ ಆಗಬಹುದುʼʼ ಎಂದಿದ್ದಾರೆ.
ಲಲಿತ್ ಮೋದಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಫೋಟೊಗಳು ಅವರಿಬ್ಬರ ನಡುವೆ ಹತ್ತಿರದ ಸಂಬಂಧ ಇರುವುದನ್ನು ಖಚಿತಪಡಿಸುತ್ತಿವೆ. ನವ ಜೋಡಿಗಳಂತೆ ಇಬ್ಬರೂ ಫೋಟೊಗೆ ಪೋಸ್ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಹುಟ್ಟುಹಾಕಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದ ಲಲಿತ್ ಮೋದಿ ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗುವುದರಿಂದ ತಪ್ಪಿಸಿಕೊಳ್ಳಲು 2010ರಲ್ಲಿಯೇ ಪಲಾಯನಗೈದಿದ್ದು, ಸದ್ಯ ಲಂಡನ್‌ನಲ್ಲಿಯೇ ನೆಲೆಸಿದ್ದಾರೆ.
1991ರಲ್ಲಿಯೇ ಮಿನಲ್ ಸಗ್ರಾಣಿ ಎಂಬುವರನ್ನು ಮೋದಿ ಮದುವೆಯಾಗಿದ್ದರು. ಇವರಿಬ್ಬರಿಗೆ ರುಚಿರ್ ಎಂಬ ಮಗ ಹಾಗೂ ಆಲಿಯಾ ಎಂಬ ಮಗಳಿದ್ದಾಳೆ. ಸಗ್ರಾಣಿಗೆ ಇದು ಎರಡನೇ ಮದುವೆಯಾಗಿದ್ದು, ಕರಿಮಾ ಸಗ್ರಾಣಿ ಎಂಬ ಮಗಳಿದ್ದಳು. 2018ರಲ್ಲಿ ಮಿನಲ್ ಸಗ್ರಾಣಿ ಕ್ಯಾನ್ಸರ್ನಿಂದಾಗಿ ಮೃತಪಟ್ಟಿದ್ದು,ಅಂದಿನಿಂದ ಲಲಿತ್ ಮೋದಿ ಏಕಾಂಗಿಯಾಗಿದ್ದಾರೆ.
೧೯೯೪ರ ಭುವನ ಸುಂದರಿ
1994 ರಲ್ಲಿ ಭುವನ ಸುಂದರಿ ಕಿರೀಟ ತೊಟ್ಟಿದ್ದ ಸುಶ್ಮಿತಾ ಸೇನೆ, ನಂತರ ಬಾಲಿವುಡ್‌ನಲ್ಲಿ ಮಿಂಚಿದ್ದರು. ಹಲವಾರು ಹಿಟ್ ಸಿನಿಮಾಗಳನ್ನೂ ನೀಡಿದ್ದರು. ಅವರು ಈ ಸಂಬಂಧದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರು ಮಗಳೊಂದಿಗೆ ಇತ್ತೀಚೆಗೆ ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿದ್ದ ಫೋಟೊಗಳನ್ನು ಶೇರ್ ಮಾಡಿದ್ದರು. ಬಹುಶಃ ಇದೇ ಸಂದರ್ಭದಲ್ಲಿ ಮೋದಿ ಕೂಡ ಅವರ ಜತೆಗಿದ್ದಿರಬಹುದು ಎನ್ನಲಾಗಿದೆ.
ಸುಶ್ಮೀತಾ ಸೇನ್ ಬಾಲಿವುಡ್‌ನ ಹೆಮ್ಮೆಯ ಸಿಂಗಲ್ ಪೇರೆಂಟ್‌ಗಳಲ್ಲಿ ಒಬ್ಬರು. ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಲಹುತ್ತಿದ್ದಾರೆ. ಮದುವೆಯ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ಸೇನ್, ಇದುವರೆಗೆ ಮೂರು ಬಾರಿ ಮದುವೆಯಾಗುವ ಹಂತಕ್ಕೆ ತಾನು ಬಂದಿದ್ದು, ಈ ಸಂದರ್ಭದಲ್ಲೆಲ್ಲಾ ದೇವರೇ ನನ್ನನ್ನು ರಕ್ಷಿಸಿದ್ದ ಎಂದಿದ್ದರು.
ಈ ಹಿಂದೆ ಸುಷ್ಮಿತಾ ಸೇನ್ ವಯಸ್ಸಿನಲ್ಲಿ ತನಗಿಂತ 15 ವರ್ಷ ಚಿಕ್ಕವನಾಗಿದ್ದ ರೋಹ್ಮನ್ ಶಾಲ್ ಎಂಬ ಮಾಡೆಲ್ ಜತೆಗೆ ಸಂಬಂಧ ಇಟ್ಟುಕೊಂಡಿದ್ದರು. ಅವರಿಬ್ಬರೂ 2018ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲಿಗೆ ಭೇಟಿಯಾಗಿದ್ದರು. ಈ ಸಂಬಂಧವನ್ನು ಅವರು ಕಳೆದ ವರ್ಷ ಕಡಿದುಕೊಂಡಿದ್ದರು.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿಯೇ ಬರೆದುಕೊಂಡಿದ್ದ ಅವರು,. ‘ನಾವಿಬ್ಬರು ಸ್ನೇಹಿತರಾಗಿ ಪರಿಚಯ ಆದೆವು. ಈಗ ಪುನಃ ಸ್ನೇಹಿತರಾಗಿದ್ದೇವೆ. ಈ ಸಂಬಂಧವು ದೀರ್ಘವಾಗಿತ್ತು. ನಮ್ಮ ನಡುವಿನ ಪ್ರೀತಿ ಮಾತ್ರ ಹಾಗೇ ಉಳಿದಿರಲಿದೆ’ ಎಂದಿದ್ದರು.
ʼʼಅದೃಷ್ಟವಶಾತ್ ನಾನು ಜೀವನಲ್ಲಿ ಬಹಳ ಕುತೂಹಲಕಾರಿಯಾದ ಕೆಲ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. ಆದರೆ ನಾನು ಮದುವೆಯಾಗದೇ ಇರುವುದರಕ್ಕೆ ಏಕೈಕ ಕಾರಣವೇನೆಂದರೆ ನನ್ನ ಮಕ್ಕಳನ್ನು ನೋಡಿಕೊಳ್ಳಲು ಅವರು ಬೆಂಬಲ ನೀಡದಿರುವುದೇ ಆಗಿದೆʼʼ ಎಂದು ಸುಶ್ಮಿತಾ ಸೇನ್ ಹೇಳಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಈಗ ಮೋದಿ ಜತೆಗಿನ ಅವರ ಹೊಸ ಸಂಬಂಧ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.