ನವದೆಹಲಿ: ಭಾರತೀಯ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಾಲಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಗುರವಾಗಿ ಮಾತನಾಡಿದ್ದ ಇಂಡಿಯನ್ ಪ್ರಿಮಿಯರ್ ಲೀಗ್(IPL)ನ ಮಾಜಿ ಕಮಿಷನರ್ ಲಲಿತ್ ಮೋದಿ (Lalit Modi) ಅವರು ಬೇಷರತ್ತಾಗಿ ಕ್ಷಮೆ ಕೋರಿದ್ದರಿಂದ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ (Supreme Court) ಕೈ ಬಿಟ್ಟಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠವು, ಲಲಿತ್ ಮೋದಿ ಅವರು ಸಲ್ಲಿಸಿದ ಅಫಿಡವಿಟ್ ಪರಿಗಣಿಸಿತು. ಭವಿಷ್ಯದಲ್ಲಿ ನ್ಯಾಯಾಲಯಗಳು ಅಥವಾ ಭಾರತೀಯ ನ್ಯಾಯಾಂಗದ ಘನತೆ ಅಥವಾ ಗೌವರಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡುವುದಿಲ್ಲ ಎಂದು ಲಲಿತ್ ಮೋದಿ ಅವರು ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಲಲಿತ್ ಮೋದಿ ಅವರ ಬೇಷರತ್ ಕ್ಷಮಾಪಣೆಯನ್ನು ನಾವು ಸ್ವೀಕರಿಸಿದ್ದೇವೆ. ಪ್ರತಿವಾದಿ(ಮೋದಿ) ಅವರು ಭವಿಷ್ಯದಲ್ಲಿ ಇಂಥ ಯಾವುದೇ ಪ್ರಯತ್ನವನ್ನು ಮಾಡಬಾರದು ಎಂದು ಎಚ್ಚರಿಸುತ್ತಿದ್ದೇವೆ. ಭಾರತೀಯ ನ್ಯಾಯಾಂಗ ಮತ್ತು ನ್ಯಾಯಾಲಯಗಳ ಪ್ರತಿಷ್ಠೆಗೆ ಕಳಂಕ ತರಬಾರದು ಎಂದು ಪೀಠ ಹೇಳಿದೆ. ಪ್ರತಿಯೊಬ್ಬರು ಸಂಸ್ಥೆಯನ್ನು ಇಡಿಯಾಗಿ ಗೌರವಿಸಬೇಕು. ಇದೊಂದೇ ನಮ್ಮ ಕಾಳಜಿಯಾಗಿದೆ ಎಂದು ಪೀಠವು ಹೇಳಿತು.
ಇದನ್ನೂ ಓದಿ: Lalit Modi | ರೋಹ್ಟಗಿ ನಿಮ್ಮನ್ನು ಖರೀದಿಸಿ, ಮಾರಾಟ ಮಾಡುವ ಸಾಮರ್ಥ್ಯವಿದೆ: ಲಲಿತ್ ಮೋದಿ ಆವಾಜ್!
ಲಲಿತ್ ಮೋದಿ ಅವರು ಸೋಷಿಯಲ್ ಮೀಡಿಯಾ ಹಾಗೂ ಸುದ್ದಿ ಪತ್ರಿಕೆಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ಮಾಡಿದ ಟೀಕೆಗಳ ವಿರುದ್ಧ ಬೇಷರತ್ತಾಗಿ ಕ್ಷಮಾಪಣೆ ಕೇಳುವಂತೆ ಸೂಚಿಸಿತ್ತು. ಲಲಿತ್ ಮೋದಿ ಅವರು ಕಾನೂನು ಮತ್ತು ಸಂಸ್ಥೆಗಿಂತ ಮೇಲ್ಪಟ್ಟವರಲ್ಲ. ಮುಂದೆ ಭವಿಷ್ಯದಲ್ಲಿ ಇಂಥ ನಡವಳಿಕೆ ಮತ್ತೆ ಮರುಕಳಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.