ಪಟನಾ: ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಯಶಸ್ವಿ ಕಿಡ್ನಿ ಕಸಿ ಬಳಿಕ ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ಸಿಂಗಾಪುರದಲ್ಲಿ ಎರಡು ತಿಂಗಳ ಹಿಂದೆ ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈಗ ಅವರು ಗುಣಮುಖರಾದ ಕಾರಣ ಭಾರತಕ್ಕೆ ಆಗಮಿಸಿದ್ದಾರೆ.
ಸಿಂಗಾಪುರದಲ್ಲಿ ನೆಲೆಸಿರುವ ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ ಅವರು ತಂದೆಗೆ ಒಂದು ಕಿಡ್ನಿ ದಾನ ಮಾಡಿದ್ದಾರೆ. ತಂದೆಯು ಭಾರತಕ್ಕೆ ಆಗಮಿಸುತ್ತಿರುವ ಈ ಹಿನ್ನೆಲೆಯಲ್ಲಿ ರೋಹಿಣಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. “ನನ್ನ ತಂದೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ” ಎಂಬುದಾಗಿ ಲಾಲು ಅಭಿಮಾನಿಗಳಲ್ಲಿ ಪುತ್ರಿ ಮನವಿ ಮಾಡಿದ್ದಾರೆ.
“ನಾನು ನಿಮಗೊಂದು ಪ್ರಮುಖ ವಿಚಾರ ಹೇಳಬೇಕು. ಇದು ನನ್ನ ತಂದೆ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಅವರು ಶನಿವಾರ ಸಿಂಗಾಪುರದಿಂದ ಭಾರತಕ್ಕೆ ಬರುತ್ತಿದ್ದಾರೆ. ಮಗಳಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಇನ್ನುಮುಂದೆ ನೀವೇ ಅವರನ್ನು ಆರೈಕೆಯಿಂದ ನೋಡಿಕೊಳ್ಳಬೇಕು” ಎಂದು ರೋಹಿಣಿ ಆಚಾರ್ಯ ಭಾವುಕರಾಗಿದ್ದಾರೆ.
ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ಗೆ ಕಿಡ್ನಿ ಕೊಟ್ಟ ಪುತ್ರಿ ರೋಹಿಣಿ ಆಚಾರ್ಯ ಹೆಮ್ಮೆಯ ಮಗಳು ಎಂದು ಶ್ಲಾಘಿಸಿದ ಬಿಜೆಪಿ ಕೇಂದ್ರ ಸಚಿವ