ಹೊಸದಿಲ್ಲಿ: ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ ಲಾಲು ಯಾದವ್ (Lalu Prasad Yadav), ಅವರ ಪತ್ನಿ ಹಾಗೂ ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಇತರರಿಗೆ ಇಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
₹50,000 ವೈಯಕ್ತಿಕ ಬಾಂಡ್‌ನಲ್ಲಿ ಬಿಹಾರದ ಈ ಪ್ರಮುಖ ರಾಜಕೀಯ ಕುಟುಂಬಕ್ಕೆ ನ್ಯಾಯಾಲಯ ಜಾಮೀನು ನೀಡಿತು. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿದೆ. ಆರೋಪಿಗಳಿಗೆ ದೋಷಾರೋಪ ಪಟ್ಟಿಯ ಪ್ರತಿಗಳನ್ನು ನೀಡುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನ್ಯಾಯಾಲಯ ಆದೇಶಿಸಿದೆ. ಯಾದವ್, ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ಸಮನ್ಸ್ ನಂತರ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರ ಮುಂದೆ ಖುದ್ದು ಹಾಜರಾಗಿದ್ದರು.
ಉದ್ಯೋಗಕ್ಕಾಗಿ ಜಮೀನು ಲಂಚ ಹಗರಣದಲ್ಲಿ (land-for-job scam) ಯಾದವ್ ಕುಟುಂಬ ಮತ್ತು ಇತರ 14 ಆರೋಪಿಗಳಿಗೆ ನ್ಯಾಯಾಲಯ ಸೆಪ್ಟೆಂಬರ್ 22ರಂದು ಸಮನ್ಸ್ ಜಾರಿ ಮಾಡಿತ್ತು. ಜುಲೈ 3ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) (CBI case) ಸಲ್ಲಿಸಿದ ಹೊಸ ಚಾರ್ಜ್‌ಶೀಟ್ ಅನ್ನು ಗಮನದಲ್ಲಿಟ್ಟುಕೊಂಡು ವಿಶೇಷ ನ್ಯಾಯಾಧೀಶ ಗೋಯೆಲ್, ಎಲ್ಲಾ ಆರೋಪಿಗಳನ್ನು ಖುದ್ದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದರು.
ಲಾಲು ಯಾದವ್, ಅವರ ಪತ್ನಿ, ಕಿರಿಯ ಪುತ್ರ, ಪಶ್ಚಿಮ ಮಧ್ಯ ರೈಲ್ವೆಯ ಮಾಜಿ ಜಿಎಂ (ಡಬ್ಲ್ಯುಸಿಆರ್), ಖಾಸಗಿ ಕಂಪನಿ ಮತ್ತು ಕೆಲವು ಖಾಸಗಿ ವ್ಯಕ್ತಿಗಳು ಸೇರಿದಂತೆ ಪ್ರಕರಣದ (railway scam) 17 ಆರೋಪಿಗಳ ವಿರುದ್ಧ ಸಿಬಿಐ ಸಲ್ಲಿಸಿದ ಎರಡನೇ ಆರೋಪಪಟ್ಟಿ ಇದಾಗಿದೆ. ಮೇ 18, 2022ರಂದು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಯಾದವ್ ಮತ್ತು ಅವರ ಕುಟುಂಬದ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿದೆ. ಭಾರತೀಯ ರೈಲ್ವೇಯಲ್ಲಿನ ಗ್ರೂಪ್ ʻಡಿʼ ಹುದ್ದೆಗಳ ನೇಮಕಾತಿಗೆ ಲಂಚವಾಗಿ ಲಾಲು ಹಾಗೂ ಅವರ ಕುಟುಂಬ ಜಮೀನನ್ನು ಪಡೆದುಕೊಂಡಿದೆ ಎಂದು ಸಿಬಿಐ ಆರೋಪಿಸಿದೆ.
ಆರೋಪಿಗಳು ಲಂಚ ನೀಡಿದ ಅಭ್ಯರ್ಥಿಗಳ ಅರ್ಜಿಗಳು ಮತ್ತು ದಾಖಲೆಗಳನ್ನು ಪಶ್ಚಿಮ ಮಧ್ಯ ರೈಲ್ವೆಗೆ ಕಳುಹಿಸಿ ಪ್ರಭಾವ ಬೀರಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಆರೋಪಿಗಳ ಪ್ರಭಾವದಿಂದ ಈ ಅಭ್ಯರ್ಥಿಗಳಿಗೆ ನಂತರ ರೈಲ್ವೇಯಲ್ಲಿ ಉದ್ಯೋಗ ಒದಗಿಸಲಾಗಿದೆ ಎಂದು ಅದು ಹೇಳಿದೆ.
ಕೋರ್ಟ್ ಮುಂದೆ ಹಾಜರಾದ ಲಾಲು, ʼʼಭಯಪಡುವ ಅಗತ್ಯವಿಲ್ಲ. ವಿಚಾರಣೆಗಳು ನಡೆಯುತ್ತಲೇ ಇರುತ್ತವೆ. ನಾವು ಆತಂಕಪಡುವಂಥ ಏನನ್ನೂ ಮಾಡಿಲ್ಲʼʼ ಎಂದರು.
ಇದನ್ನೂ ಓದಿ: Video: ಪ್ರತಿಪಕ್ಷಗಳ ಸಭೆಯಲ್ಲಿ ರಾಹುಲ್ ಗಾಂಧಿ ಮದುವೆ ಮಾತುಕತೆ; ಗಡ್ಡದ ಮೇಲೆ ಕಣ್ಣಿಟ್ಟ ಲಾಲು ಪ್ರಸಾದ್ ಯಾದವ್