ನವದೆಹಲಿ: ಹೊಸ ಸಂಸತ್ ಭವನ ಸಂಬಂಧ ವಿವಾದಗಳು ಇನ್ನೂ ನಿಂತಿಲ್ಲ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತ್ತ ಹೊಸ ಸಂಸತ್ ಭವನ (New Parliament Building) ಉದ್ಘಾಟನೆ ಮಾಡುತ್ತಿದ್ದಂತೆ ಅತ್ತ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ರಾಷ್ಟ್ರೀಯ ಜನತಾ ದಳ(RJD), ಸಂಸತ್ ಭವನವನ್ನು ಶವಪೆಟ್ಟಿಗೆಗೆ (Coffin) ಹೋಲಿಕೆ ಮಾಡಿ, ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ. ಆರ್‌ಜೆಡಿ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಇಂದು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡಲಾಯಿತು ಎಂಬುದನ್ನು ಸಾಂಕೇತಿವಾಗಿ ಹೇಳಲು ಶವಪೆಟ್ಟಿಗೆಗೆ ಹೋಲಿಸಲಾಗಿದೆ ಎಂದು ಆರ್‌ಜೆಡಿ ಹೇಳಿದೆ.
ಟ್ವೀಟ್ ಬಗ್ಗೆ ವಿವರಿಸಿದ ಪಕ್ಷದ ನಾಯಕ ಶಕ್ತಿ ಸಿಂಗ್ ಯಾದವ್ ಅವರು, ನಾವು ಮಾಡಿರುವ ಟ್ವೀಟ್‌ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುತ್ತಿರುವುದನ್ನು ಸಂಕೇತಿಸುತ್ತಿದೆ. ದೇಶವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಾಗಿದೆ ಮತ್ತು ಇದು ಚರ್ಚೆಯ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಜನತಾ ದಳ ಮಾಡಿರುವ ಟ್ವೀಟ್
ये क्या है? pic.twitter.com/9NF9iSqh4L
— Rashtriya Janata Dal (@RJDforIndia) May 28, 2023
ಆರ್‌ಜೆಡಿ ವರ್ತನೆಯ ವಿರುದ್ಧ ಕೆಂಡಕಾರಿರುವ ಬಿಜೆಪಿಯ ನಾಯಕ ಸುಶೀಲ್ ಮೋದಿ ಅವರು, ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆ ಹೋಲಿಕೆ ಮಾಡಿರುವವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರ್‌ಜೆಡಿ ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡಿರುವುದು ದುರದೃಷ್ಟಕರ. ಅವರು ಇಂದು ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಕೆ ಮಾಡುತ್ತಿದ್ದಾರೆ. ಹಳೆ ಸಂಸತ್ ಭವನವನ್ನು ಅವರು ಶೂನ್ಯದೊಂದಿಗೆ ಹೋಲಿಕೆ ಮಾಡುತ್ತಾರೆಯೇ? ನಾವು ಈ ಮೊದಲು ಸೊನ್ನೆಯಲ್ಲಿ ಕುಳಿತುಕೊಳುತ್ತಿದ್ದೇವು ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಸಂಯುಕ್ತ ಜನತಾ ದಳ ಕೂಡ ಈ ರೇಸ್‌ನಲ್ಲಿ ನುಗ್ಗಿದ್ದು, ಹೊಸ ಸಂಸತ್ ಭವನದ ಉದ್ಘಾಟನೆಯೊಂದಿಗೆ ಅಪಮಾನ ಇತಿಹಾಸವನ್ನು ಬರೆಯಲಾಗಿದೆ ಎಂದು ಹೇಳಿದೆ.
New Parliament Building: ಕಾರ್ಮಿಕರನ್ನು ಸನ್ಮಾನಿಸಿದ ಪ್ರಧಾನಿ ನೇರಂದ್ರ ಮೋದಿ
ನೂತನ ಸಂಸತ್ ಭವನ ಉದ್ಘಾಟನೆ (New Parliament Building Inauguration) ನಿಮಿತ್ತ ಮುಂಜಾನೆ 7.30ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನಿ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲ ಪೂಜೆಗಳಲ್ಲೂ ಪಾಲ್ಗೊಂಡರು. ಗಣಪತಿ ಹೋಮ ಮುಕ್ತಾಯವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಸೆಂಗೋಲ್ನ್ನು ಹಿಡಿದು, ನೂತನ ಸಂಸತ್ ಭವನ ಪ್ರವೇಶಿಸಿ, ಅಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ಪ್ರತಿಷ್ಠಾಪಿಸಿದರು. ಈ ವೇಳೆ ತಮಿಳುನಾಡಿನ ಅಧೀನಂ ಮಠದ ಪುರೋಹಿತರು, ಸಂತರು, ಮಠಾಧೀಶರು ಇದ್ದರು. ಮಂತ್ರಘೋಷ ಮೊಳಗುತ್ತಿತ್ತು.
ಇದನ್ನೂ ಓದಿ: New Parliament Building: ನೂತನ ಸಂಸತ್ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಇಷ್ಟಾದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕರನ್ನು ಸನ್ಮಾನಿಸಿದರು. ನೂತನ ಸಂಸತ್ ಭವನ ನಿರ್ಮಾಣ ಮಾಡಿದ ಈ ಕೆಲಸಗಾರರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಅದಕ್ಕೂ ಮೊದಲು ನರೇಂದ್ರ ಮೋದಿಯವರು ಸಂಸತ್ ಭವನದ ಫಲಕ ಅನಾವರಣಗೊಳಿಸಿದರು. ನಂತರ ಅಲ್ಲಿ ಸರ್ವಧರ್ಮಗಳ ಪ್ರಾರ್ಥನೆ ನಡೆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಶಾ, ಇನ್ನಿತರ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಅನುರಾಗ್ ಠಾಕೂರ್, ರಾಜನಾಥ್ ಸಿಂಗ್ ಮತ್ತಿತರ ಹಲವು ಗಣ್ಯರು ಇದ್ದರು. ಇವರಲ್ಲಿ ಸ್ಪೀಕರ್ ಓಂ ಬಿರ್ಲಾ ಪ್ರತಿ ಕಾರ್ಯದಲ್ಲೂ ಪ್ರಧಾನಿ ಮೋದಿಗೆ ಜತೆಯಾದರು.
ಬಿಜೆಪಿ ನಾಯಕ ಸುಶೀಲ್ ಮೋದಿ ಆಕ್ರೋಶ
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.