ಬಿಹಾರದ ಪಾಟ್ನಾದಲ್ಲಿ ಇಂದು ಪ್ರತಿಪಕ್ಷಗಳ ಸಭೆ (Opposition Meet) ನಡೆಯಿತು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಎನ್ಸಿಪಿ, ಆರ್ಜೆಡಿ, ಜೆಡಿಯು..ಮತ್ತಿತರ ಪಕ್ಷಗಳ ವರಿಷ್ಠರು ಪಾಲ್ಗೊಂಡು ಚರ್ಚಿಸಿದರು. 2024ರ ಲೋಕಸಭೆ ಚುನಾವಣೆಗಾಗಿ ಒಗ್ಗಟ್ಟಿನ ಬುನಾದಿ ಹಾಕಿದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav), ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, ಇತ್ತೀಚೆಗಷ್ಟೇ ನಡೆದ ಕರ್ನಾಟಕ ಚುನಾವಣೆಯನ್ನು ಪ್ರಸ್ತಾಪಿಸಿ ಬಿಜೆಪಿಯನ್ನು ವಂಗ್ಯ ಮಾಡಿದರು.
‘ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಗವಾನ್ ಹನುಮಂತ ಬಿಜೆಪಿ ಪಕ್ಷವನ್ನು ತನ್ನ ಗಧೆಯಿಂದ ಹೊಡೆದು ಮಕಾಡೆ ಮಲಗಿಸಿದ. ರಾಹುಲ್ ಗಾಂಧಿಯ ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಮಾಡಿದ. ಆಂಜನೇಯ ಪ್ರತಿಪಕ್ಷಗಳ ಜತೆಗಿದ್ದಾನೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಪ್ರತಿಪಕ್ಷಗಳ ಗೆಲ್ಲುವಂತೆ ಮಾಡುತ್ತಾನೆ ಎಂಬ ನಂಬಿಕೆ ನನಗೆ ಇದೆ’ ಎಂದು ಹೇಳಿದರು. ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆದು, ಮೇ 13ರಂದು ಫಲಿತಾಂಶ ಹೊರಬಿದ್ದಿತ್ತು. ಕಾಂಗ್ರೆಸ್ 136 ಕ್ಷೇತ್ರಗಳನ್ನು ಗೆದ್ದುಕೊಂಡು ಸರ್ಕಾರ ರಚನೆ ಮಾಡಿದೆ. ಇದೇ ವಿಷಯವನ್ನು ಇಂದು ಲಾಲು ಪ್ರಸಾದ್ ಯಾದವ್ ಪ್ರತಿಪಕ್ಷಗಳ ಸಭೆ ಬಳಿಕ ಹೇಳಿದರು.
ಕರ್ನಾಟಕದಲ್ಲಿ ಚುನಾವಣೆಗೂ ಪೂರ್ವ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಅದರಲ್ಲಿ ಬಜರಂಗದಳದಂಥ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಜರಂಗದಳವನ್ನು ಹನುಮಂತನಿಗೆ ಲಿಂಕ್ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧದ ಪ್ರಚಾರಕ್ಕೆ ಇದನ್ನೇ ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಕಾಂಗ್ರೆಸ್ಗೆ ತಿರುಗೇಟು ಕೊಡಲು ಹಲವು ಕಡೆಗಳಲ್ಲಿ ಹನುಮಾನ್ ಚಾಲೀಸಾ ಪಠಣವೂ ಭರ್ಜರಿಯಾಗಿಯೇ ನಡೆದಿತ್ತು. ಆದರೆ ಕಾಂಗ್ರೆಸ್ ಗೆದ್ದಾಗ ಇದನ್ನೇ ಇಟ್ಟುಕೊಂಡು ಬಿಜೆಪಿಯನ್ನು ಅನೇಕರು ಟ್ರೋಲ್ ಮಾಡಿದ್ದರು. ಕಾಟಾಚಾರಕ್ಕೆ ಹನುಮಾನ್ ಚಾಲೀಸಾ ಪಠಿಸಿದ ಬಿಜೆಪಿಗೆ ಹನುಮಂತನೇ ಬುದ್ಧಿಕಲಿಸಿದ್ದಾನೆ ಎಂಬ ಮಾತುಗಳೂ ಹರಿದಾಡಿದ್ದವು. ಲಾಲು ಪ್ರಸಾದ್ ಯಾದವ್ ಕೂಡ ಇದನ್ನೇ ಇಟ್ಟುಕೊಂಡು ಬಿಜೆಪಿಯನ್ನು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: Opposition Meet: ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ಗೆ ಬೈದ ದೀದಿ; ಮೂಡದ ಒಮ್ಮತ, ಶೀಘ್ರವೇ ಮತ್ತೆ ಸಭೆ
ಇನ್ನು ಲಾಲು ಪ್ರಸಾದ್ ಯಾದವ್ ಅವರು ಇಂದಿನ ಸಭೆ ವೇಳೆ ರಾಹುಲ್ ಗಾಂಧಿಗೆ ಮದುವೆಯಾಗುವಂತೆ ಸಲಹೆ ನೀಡಿದರು. ಅಷ್ಟೇ ಅಲ್ಲ ಗಡ್ಡವನ್ನು ಟ್ರಿಮ್ ಮಾಡಿಕೊಳ್ಳುವಂತೆಯೂ ಹೇಳಿದರು. ಅವರ ಈ ಮಾತಿಗೆ ಸಭೆಯಲ್ಲಿ ಇದ್ದವರೆಲ್ಲ ದೊಡ್ಡದಾಗಿ ನಕ್ಕಿದ್ದಾರೆ.