Site icon Vistara News

ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

Lalu Prasad Yadav

Narendra Modi government could fall by August: Lalu Prasad Yadav's big claim

ಪಟನಾ: ಲೋಕಸಭೆ ಚುನಾವಣೆ (Lok Sabha Election) ಪ್ರಚಾರದ ಭರಾಟೆಯ ಜತೆಗೆ ರಾಜಕೀಯ ನಾಯಕರು ಪ್ರಸ್ತಾಪಿಸುತ್ತಿರುವ ವಿಷಯಗಳು ಕೂಡ ಸಾರ್ವಜನಿಕವಾಗಿ ಭಾರಿ ಚರ್ಚೆ, ವಿವಾದ, ಟೀಕೆಗಳಿಗೆ ಗುರಿಯಾಗುತ್ತಿವೆ. ಅದರಲ್ಲೂ, ಮುಸ್ಲಿಂ ಮೀಸಲಾತಿಯು (Muslim Reservation) ಪ್ರಮುಖ ವಿಷಯವಾಗಿದ್ದು, ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡುವುದಿಲ್ಲ ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಇದರ ಬೆನ್ನಲ್ಲೇ, “ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ನೀಡಬೇಕು” ಎಂದು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಹೇಳಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಲಾಲು ಪ್ರಸಾದ್‌ ಯಾದವ್‌, “ಮುಸ್ಲಿಮರಿಗೆ ಮೀಸಲಾತಿ ಸಿಗಬೇಕು. ಅದರಲ್ಲೂ, ಎಲ್ಲ ಮೀಸಲಾತಿಯೂ ಮುಸ್ಲಿಮರಿಗೆ ಸಿಗಬೇಕು” ಎಂದು ಹೇಳಿದ್ದಾರೆ. “ಬಿಹಾರದಲ್ಲಿ ಬಿಜೆಪಿಯನ್ನು ಜನ ದೂರ ಇಟ್ಟಿದ್ದಾರೆ. ಅವರ ಮತಗಳು ಕೂಡ ಆರ್‌ಜೆಡಿಗೇ ಬರುತ್ತವೆ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಜಂಗಲ್‌ ರಾಜ್‌ ಆಡಳಿತ ಜಾರಿಗೆ ತರುತ್ತಾರೆ. ಇದರಿಂದಾಗಿ ಅವರನ್ನು ಜನ ನಂಬುತ್ತಿಲ್ಲ” ಎಂದು ಕೂಡ ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ.

ಮೋದಿ ತಿರುಗೇಟು

ಎಲ್ಲ ಮೀಸಲಾತಿ ಮುಸ್ಲಿಮರಿಗೆ ಸಿಗಬೇಕು ಎಂದು ಲಾಲು ಪ್ರಸಾದ್‌ ಯಾದವ್‌ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. “ಇಂಡಿಯಾ ಒಕ್ಕೂಟದ ನಾಯಕರೊಬ್ಬರು ಸಂಪೂರ್ಣ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಬೇಕು ಎಂದಿದ್ದಾರೆ. ಇವರು ಮೇವು ಹಗರಣದಲ್ಲಿ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಜಾಮೀನು ಪಡೆದು ಹೊರಬಂದಿದ್ದಾರೆ. ಇವರು ಇಂತಹ ಹೇಳಿಕೆ ನೀಡಿದರೂ ಕಾಂಗ್ರೆಸ್‌ ಸುಮ್ಮನಿದೆ ಎಂದರೆ ಇಂಡಿಯಾ ಒಕ್ಕೂಟದ ಆಶಯವೂ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯದವರಿಗೆ (ಮುಸ್ಲಿಮರಿಗೆ) ನೀಡುವುದಾಗಿದೆ” ಎಂದು ಕುಟುಕಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ತೆಲಂಗಾಣದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ಧರ್ಮದ ಆಧಾರದ ಮೇಲೆ ನೀಡುವ ಮೀಸಲಾತಿಯನ್ನು ವಿರೋಧಿಸಿದ್ದರು. “ನಾನು ಬದುಕಿರುವವರೆಗೂ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಸಿಗುತ್ತಿರುವ ಮೀಸಲಾತಿಯ ಪಾಲನ್ನು ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಕೊಡಲು ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದರು. ಕಾಂಗ್ರೆಸ್​ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಪ್ರೇರೇಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

Exit mobile version