Site icon Vistara News

India vs Bharat : ಭಾರತದಲ್ಲಿ ಹಲ್ಲುಜ್ಜಲು ಬೇವಿನ ಕಡ್ಡಿ, ಇಂಡಿಯಾದಲ್ಲಿ ಪೇಸ್ಟ್​​! ಹೀಗೆಂದ ಇಂಡಿಯಾ ನಾಯಕ ಯಾರು ಗೊತ್ತೇ?

Lalu prasad yadav

ನವದೆಹಲಿ: ಇಂಡಿಯಾ ವರ್ಸಸ್​ ಭಾರತ್ (India vs Bharat)​ ಯುದ್ಧ ಜೋರಾಗಿ ನಡೆಯುತ್ತಿದೆ. ಪರ ವಿರೋಧಿ ಬಣಗಳಿಗೆ ಎರಡೂ ಪದಗಳ ಮೇಲೆ ಪ್ರೀತಿ ಇರುವ ಹೊರತಾಗಿಯೂ ತಮ್ಮ ನಂಬಿಕೆಯೇ ಅತ್ಯುತ್ತಮ ಎಂದು ಹೇಳುವುದಕ್ಕೆ ನಾನಾ ಉದಾಹರಣೆಗಳನ್ನೂ, ಸ್ಪಷ್ಟನೆಗಳನ್ನೂ ನೀಡುತ್ತಿದ್ದಾರೆ. ಕೆಲವರ ವಿತಂಡ ವಾದವಂತೂ ಸಹಿಲಸಾಧ್ಯವಾದ ಮಟ್ಟಕ್ಕೇರುತ್ತಿದೆ. ಒಬ್ಬರು ದೇಶಾಭಿಮಾನ ಅಂದರೆ ಇನ್ನೊಬ್ಬರು ಗುಲಾಮಗಿರಿ ಎನ್ನುತ್ತಾರೆ. ಈ ಚರ್ಚೆಗಳ ನಡುವೆ ಭಾರತದಲ್ಲಿ ಏನು ಸಿಗುತ್ತದೆ, ಏನು ಸಿಗಲ್ಲ ಎಂದು ಪ್ರತಿ ಪಕ್ಷಗಳ ಇಂಡಿಯಾ ಬ್ಲಾಕ್​ನ ನಾಯಕ ಲಾಲೂ ಪ್ರಸಾದ್ ಯಾದವ್​ (Lalu Prasad Yadav)​ ಹೇಳಿರುವ ಹಳೆ ವಿಡಿಯೊವೊಂದು ಮುನ್ನೆಲೆಗೆ ಬಂದಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಿಂದೆ ಹಲ್ಲುಜ್ಜಲು ಬಳಸುವ ಬೇವಿನ ಕಡ್ಡಿ ಬಳಸುತ್ತಿದ್ದರು. ಈ ಕಡ್ಡಿಗಳು ಭಾರತದಲ್ಲಿ ಸುಲಭವಾಗಿ ಲಭ್ಯವಿದೆ. ಆದರೆ ಇಂಡಿಯಾದಲ್ಲಿ ಲಭ್ಯವಿಲ್ಲ ಎಂದು ಯುವಕನಾಗಿದ್ದಾಗ ಲಾಲು ಪ್ರಸಾದ್ ಯಾದವ್ ವಿವರಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಇಂಡಿಯಾ ವರ್ಸಸ್​ ಭಾರತರ್​ ಹಗ್ಗಜಗ್ಗಾಟ ಆರಂಭಗೊಂಡಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪರವಾಗಿ ಕಳುಹಿಸಲಾದ ಜಿ 20 ಭೋಜನ ಆಹ್ವಾನ ಪತ್ರಿಕೆಯೊಂದಿಗೆ. ಇಂಡಿಯಾದ ರಾಷ್ಟ್ರಪತಿಯ ಬದಲು, ಮುರ್ಮು ಅವರನ್ನು ಭಾರತದ ರಾಷ್ಟ್ರಪತಿ ಎಂದು ಉಲ್ಲೇಖಿಸಲಾಗಿತ್ತು. ಈ ವೇಳೆ ದೇಶದ ಹೆಸರನ್ನು ಅಧಿಕೃತವಾಗಿ ಭಾರತದಿಂದ ಭಾರತ್ ಎಂದು ಬದಲಾಯಿಸಲು ಸರ್ಕಾರ ಮುಂದಾಗುತ್ತಿದೆಯೇ ಎಂಬ ಊಹಾಪೋಹಗಳು ಎದ್ದಿದ್ದವು. ಇಂಡೋನೇಷ್ಯಾ ಭೇಟಿಯ ಅಧಿಕೃತ ದಾಖಲೆಯಲ್ಲಿ ಪ್ರಧಾನಿ ಮೋದಿಯವರನ್ನು ಭಾರತದ ಪ್ರಧಾನಿ (ಪ್ರೈಮ್ ಮಿನಿಸ್ಟರ್ ಆಫ್​ ಇಂಡಿಯಾ ಎಂಬುದರ ಬದಲು) ಎಂದು ಉಲ್ಲೇಖಿಸಿದ ಬಳಿಕ ಚರ್ಚೆ ಜೋರಾಯಿತು.

ಪ್ರತಿಪಕ್ಷಗಳಿರುವ ಇಂಡಿಯಾ ಬಣವು ಕೇಂದ್ರ ಸರ್ಕಾರದ ಏಕಪಕ್ಷೀಯ ಕ್ರಮವನ್ನು ಪ್ರಶ್ನಿಸುತ್ತಿದೆ. ಇದೇ ವೇಳೆ ಇಂಡಿಯಾ ಬ್ಲಾಕ್​ನ ನಾಯಕ ಲಾಲು ಪ್ರಸಾದ್ ಯಾದವ್ ಅವರ ಹಳೆಯ ವೀಡಿಯೊ ಹೊರಬಂದಿದೆ. ವೀಡಿಯೊದಲ್ಲಿ, ಅವರಿಗೆ ಎಂದಾದರೂ ಟೂತ್ ಬ್ರಷ್ ಅನ್ನು ಬಳಸಿದ್ದೀರಾ ಎಂದು ಕೇಳಲಾಗುತ್ತದೆ. ಈ ವೇಳೆ ಅವರು ನಾನು ಡೆಲ್ಲಿಯಲ್ಲಿ ಮಾತ್ರ ಬಳಸುತ್ತೇನೆ. ಬಿಹಾರದ ಪಾಟ್ನಾದಲ್ಲಿ ಬೇವಿನ ಕಡ್ಡಿಯೇ ಎಂದು ಹೇಳಿದ್ದರು. ಯಾಕೆಂದರೆ ಡೆಲ್ಲಿ ಇಂಡಿಯಾ. ಅಲ್ಲಿ ಬೇವಿನ ಕಡ್ಡಿ ಸಿಗುವುದಿಲ್ಲ. ಪಾಟ್ನಾ ಭಾರತದಲ್ಲಿದೆ. ಹೀಗಾಗಿ ಇಲ್ಲಿ ಬೇವಿನ ಕಡ್ಡಿ ಲಭ್ಯ ಎಂದು ಹೇಳಿದ್ದರು.

ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸುವ ಊಹಾಪೋಹದ ಕ್ರಮವನ್ನು ಪ್ರತಿಪಕ್ಷಗಳ ನಾಯಕರು ಪ್ರಶ್ನಿಸಿದ್ದಾರೆ. ಈ ಯೋಚನೆ ಇಂಡಿಯಾ ಬಣದ ಹೆಸರಿನಿಂದ ಪ್ರೇರೇಪಿಸಲ್ಪಟ್ಟಿದೆಯೇ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತ ಮತ್ತು ಭಾರತದ ನಡುವಿನ ವ್ಯತ್ಯಾಸದ ಬಗ್ಗೆ ಲಾಲು ಯಾದವ್ ಅವರ ಹಳೆಯ ವೀಡಿಯೊವನ್ನು ಹಂಚಿಕೊಳ್ಳುವುದರ ಮೂಲಕ ಆನಂದಿಸಿದ್ದಾರೆ. ಮುಂದೊಂದು ದಿನ ಇಂಡಿಯಾ ಮತ್ತು ಭಾರತದ ನಡುವೆ ಲಾಲು ಯಾವುದನ್ನು ಆಯ್ಕೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Exit mobile version