ನವದೆಹಲಿ: ಕೊರೊನಾ ರೂಪಾಂತರಿ ಹಾಗೂ ಮಂಕಿಪಾಕ್ಸ್ ಸೋಂಕಿನ ಭೀತಿ ಮಧ್ಯೆಯೇ ದೇಶದಲ್ಲಿ ಟೊಮ್ಯಾಟೊ ಫ್ಲು (Tomato Flu- ಟೊಮ್ಯಾಟೊ ಜ್ವರ) ವ್ಯಾಪಕವಾಗಿ ಹರಡುವ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ಕೇರಳ ಹಾಗೂ ಒಡಿಶಾದಲ್ಲಿ ಟೊಮ್ಯಾಟೊ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದು ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಟ್ ರೆಸ್ಪಿರೇಟರಿ ಜರ್ನಲ್ ವರದಿ ತಿಳಿಸಿದೆ.
ಮಕ್ಕಳ ಕೈ, ಕಾಲು ಹಾಗೂ ಬಾಯಿಯನ್ನು ಬಾಧಿಸುವ ರೋಗ ಇದಾಗಿದ್ದು, ಸಣ್ಣ ಸಣ್ಣ ಗುಳ್ಳೆಗಳಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ, ಕೇರಳದಲ್ಲಿ ಮೇ ೬ರಂದು ಮೊದಲ ಬಾರಿಗೆ ಮಗುವಿನಲ್ಲಿ ಟೊಮ್ಯಾಟೊ ಫ್ಲು ಕಾಣಿಸಿಕೊಂಡಿತ್ತು. ಆದರೆ, ಇದುವರೆಗೆ ಐದು ವರ್ಷದೊಳಗಿನ ೮೨ ಮಕ್ಕಳಿಗೆ ಜ್ವರ ತಗುಲಿದೆ. ಒಡಿಶಾದಲ್ಲೂ ಆತಂಕ ಹೆಚ್ಚಾಗಿರುವ ಕಾರಣ ದೇಶಾದ್ಯಂತ ವ್ಯಾಪಿಸುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಒಡಿಶಾದಲ್ಲಿ ೨೬ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದೆ.
“ಕೊರೊನಾ ಸಾಂಕ್ರಾಮಿಕವು ದೇಶದ ಜನರನ್ನು ಬಾಧಿಸಿದ ಬೆನ್ನಲ್ಲೇ ಟೊಮ್ಯಾಟೊ ಫ್ಲು ಕೇರಳ ಹಾಗೂ ಒಡಿಶಾದಲ್ಲಿ ಹೆಚ್ಚಾಗುತ್ತಿದೆ. ಇದೊಂದು ಸಾಂಕ್ರಾಮಿಕವಾಗಿದ್ದು, ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಯಾವುದೇ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ತೆರಳಿ” ಎಂದು ಜರ್ನಲ್ ವರದಿಯಲ್ಲಿ ತಜ್ಞರು ಸೂಚಿಸಿದ್ದಾರೆ.
ಗುಳ್ಳೆಗಳ ಜತೆಗೆ ಹೆಚ್ಚಿನ ಜ್ವರ, ಮೈಕೈ ನೋವು, ಅತಿಯಾದ ಸುಸ್ತು ಇದರ ಲಕ್ಷಣಗಳಾಗಿವೆ. ವಾಕರಿಕೆ, ವಾಂತಿ, ಅತಿಸಾರ, ಕೀಲುಗಳು ಊದಿಕೊಳ್ಳುವುದು ಕೂಡ ಕೆಲವು ಮಕ್ಕಳಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ | Tomato Flu | ಕೊರೊನಾ, ಮಂಕಿಪಾಕ್ಸ್ ಭೀತಿ ಬೆನ್ನಲ್ಲೇ ʼಟೊಮ್ಯಾಟೊ ಫ್ಲುʼ ಕುರಿತು ತಜ್ಞರ ಆತಂಕ