ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ (Land For Job Scam) ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ(CBI) ಸೋಮವಾರ ಬಿಹಾರದ ಮಾಜಿ ಸಿಎಂ ರಾಬ್ಡಿ ದೇವಿಯನ್ನು ವಿಚಾರಣೆ ನಡೆಸಿತ್ತು. ಮಂಗಳವಾರ, ರಾಬ್ದಿ ದೇವಿಯ ಪತಿಯೂ ಆಗಿರುವ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವರನ್ನು ವಿಚಾರಣೆಗೊಳಪಡಿಸಿದೆ. ಇತ್ತೀಚೆಗಷ್ಟೇ ಕಿಡ್ನಿ ಕಸಿಯಿಂದ ಚೇತರಿಸಿಕೊಂಡಿರುವ ಲಾಲು ಅವರನ್ನು ಪಟನಾದ ಅವರ ಪುತ್ರಿಯ ಮನೆಯಲ್ಲಿ ಪ್ರಶ್ನಿಸಿತು.
ಲಾಲು ಪ್ರಸಾದ್ ಯಾದವ್ ಅವರು 2004ರಿಂದ 2009ರವರೆಗೆ ರೈಲ್ವೆ ಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸಿಬಿಐ ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಸಿಬಿಐ ಲಾಲು-ರಾಬ್ಡಿ ದಂಪತಿಯ ಪುತ್ರಿಯರಾದ ಮಿಸಾ ಮತ್ತು ಹೇಮಾ ಸೇರಿದಂತೆ ಇತರರನ್ನು ಹೆಸರಿಸಿದೆ. ಉದ್ಯೋಗಕ್ಕಾಗಿ ಲಾಲು ಮತ್ತು ಅವರ ಕುಟುಂಬದ ಸದಸ್ಯರ ಅತ್ಯಂತ ಕಡಿಮೆ ದರಕ್ಕೆ ಭೂಮಿಯನ್ನು ಖರೀದಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಲಾಲು ಮತ್ತು ಅವರ ಪತ್ನಿ ರಾಬ್ಡಿ ಹಾಗೂ ಮಕ್ಕಳು ಮಾತ್ರವಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯೋಗಕ್ಕಾಗಿ ಭೂಮಿ ನೀಡಿದ 12 ಜನರ ವಿರುದ್ಧವೂ ಆರೋಪವಿದೆ. 2022ರ ಮೇ ತಿಂಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ, ಲಾಲು ಪ್ರಸಾದ್ ಯಾದವ್ ಅವರ ಸಹಾಯಕ ಮತ್ತು ವಿಶೇಷ ಕರ್ತವ್ಯದ ಮಾಜಿ ಅಧಿಕಾರಿ ಭೋಲಾ ಯಾದವ್ ಅವರನ್ನು ಈ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು.
ಇದನ್ನೂ ಓದಿ: Land For Job Scam: ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮನೆಗೆ ಬಂದ ಸಿಬಿಐ ಅಧಿಕಾರಿಗಳು; ರಾಬ್ರಿ ದೇವಿ ವಿಚಾರಣೆ
ಏತನ್ಮಧ್ಯೆ, ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಸಿಬಿಐ ವಿರುದ್ಧ ಗುಡುಗಿದ್ದಾರೆ. ಪಪ್ಪಾ(ಲಾಲು ಪ್ರಸಾದ್ ಯಾದವ್) ಅವರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಒಂದು ವೇಳೆ ಅವರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರನ್ನೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಮೊನ್ನೆಯಷ್ಟೇ, ನಿಮ್ಮ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿನಾಕಾರಣ ಕಿರುಕುಳ ನೀಡುತ್ತಿದೆ ಎಂದು 8 ಪ್ರತಿಪಕ್ಷಗಳು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದವು.