ಪಟನಾ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ತೇಜಸ್ವಿ ಯಾದವ್ ಸೇರಿದಂತೆ ಲಾಲು ಪ್ರಸಾದ್ ಯಾದವ್ ಅವರ ಮಕ್ಕಳ ಮನೆ ಹಾಗೂ ಆಸ್ತಿಪಾಸ್ತಿಗಳ ಶೋಧ ನಡೆಸಿದ್ದಾರೆ.
ದೇಶಾದ್ಯಂತ ಇಡಿ ನಡೆಸಿದ ದಾಳಿಗಳಲ್ಲಿ, ಬಿಹಾರದ ಮಾಜಿ ಸಿಎಂಗೆ ಸಂಬಂಧಿಸಿದ ಆಸ್ತಿಗಳು ಇರುವ 24 ಕಡೆ ಶೋಧ ನಡೆಸಲಾಗಿದೆ. ಲಾಲು ಅವರ ಪುತ್ರ ತೇಜಸ್ವಿ ಯಾದವ್ ಹಾಗೂ ಇಬ್ಬರು ಹೆಣ್ಣುಮಕ್ಕಳ ಆಸ್ತಿಪಾಸ್ತಿಗಳ ಬಳಿಯೂ ಶೋಧಿಸಲಾಗಿದೆ.
ರೈಲ್ವೇ ಜಮೀನು ಲಂಚ ಪ್ರಕರಣಕ್ಕೆ ಸಂಬಂಧಿಸಿ ಈ ಶೋಧ ನಡೆದಿದೆ ಎಂದು ಇಡಿ ತಿಳಿಸಿದೆ. ಲಾಲು ಅವರು 2004-09ರ ಅವಧಿಯಲ್ಲಿ ಕೇಂದ್ರದ ಯುಪಿಎ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದಾಗ ನಡೆದ ಹಗರಣ ಇದು. ರೈಲ್ವೇ ಉದ್ಯೋಗಗಳಿಗಾಗಿ ಲಂಚವಾಗಿ ಜಮೀನನ್ನು ಲಾಲು ಕುಟುಂಬಸ್ಥರ ಮೂಲಕ ಪಡೆದಿದ್ದರು ಎಂಬುದು ಈ ಹಗರಣದ ಪ್ರಮುಖ ಆರೋಪವಾಗಿದೆ.
ಶೋಧದ ವೇಳೆ 53 ಲಕ್ಷ ರೂಪಾಯಿ ನಗದು, 1,900 ಡಾಲರ್ ವಿದೇಶದ ಕರೆನ್ಸಿ, 540 ಗ್ರಾಂ ಚಿನ್ನದ ಗಟ್ಟಿ, 1.5 ಕೆಜಿಗೂ ಹೆಚ್ಚು ಚಿನ್ನದ ಆಭರಣಗಳು, ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ. ಲಾಲು ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರನ್ನು ಸಿಬಿಐ ವಿಚಾರಣೆ ನಡೆಸಿದ ಬೆನ್ನಲ್ಲೇ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Land For Job Scam: ರಾಬ್ಡಿ ದೇವಿ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ವಿಚಾರಣೆ ನಡೆಸಿದ ಸಿಬಿಐ, ಪುತ್ರಿ ಹೇಳಿದ್ದೇನು?