Site icon Vistara News

Land for Jobs Case: ಲಾಲು ಪ್ರಸಾದ್ ಯಾದವ್​ ಆಪ್ತನ ಪತ್ನಿಗೂ ಸಂಕಷ್ಟ; 9 ಕಡೆಗಳಲ್ಲಿ ಸಿಬಿಐ ದಾಳಿ​

Land for Jobs Case CBI searches 9 locations linked To RJD MLA Kiran Devi

#image_title

ಬಿಹಾರದಲ್ಲಿ ನಡೆದಿದ್ದ ಉದ್ಯೋಗಕ್ಕಾಗಿ ಭೂಮಿ ಹಗರಣದ (Land for Jobs Case)ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (CBI) ಈಗಾಗಲೇ ಆರ್​ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್, ಅವರ ಪುತ್ರ ತೇಜಸ್ವಿ ಯಾದವ್​ ಮತ್ತು ಕುಟುಂಬದ ಇನ್ನಿತರ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿ, ಶೋಧ ಮಾಡಿದೆ. ಅದರ ಮುಂದುವರಿದ ಭಾಗವಾಗಿ ಈಗ ಸಿಬಿಐ ಅಧಿಕಾರಿಗಳು ಆರ್​ಜೆಡಿಯ ಶಾಸಕಿ ಕಿರಣ್ ದೇವಿ ನಿವಾಸದ ಮೇಲೆ ರೇಡ್ ಮಾಡಿದ್ದಾರೆ. ಅವರ ಪಾಟ್ನಾದ ಹಾರ್ಡಿಂಜ್ ರಸ್ತೆಯಲ್ಲಿರುವ ಮನೆ, ಭೋಜ್​ಪುರಿ ಜಿಲ್ಲೆಯ ಅಗಿಯಾನವ್ ಗ್ರಾಮದಲ್ಲಿರುವ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಾಸಕಿ ಕಿರಣ್ ದೇವಿ ಅವರ ಪತಿ ಅರುಣ್ ಯಾದವ್ ಅವರು ದೊಡ್ಡಮಟ್ಟದ ಮರಳು ವ್ಯಾಪಾರಿಯಾಗಿದ್ದು, ಲಾಲು ಪ್ರಸಾದ್ ಯಾದವ್​ ಅವರ ಆಪ್ತ. ಅವರೂ ಶಾಸಕರೇ ಆಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಅರುಣ್ ಯಾದವ್ ಗೆದ್ದಿಲ್ಲ. ಆಂಜಿಯಾನ್ವ್‌ನಲ್ಲಿ ಅರುಣ್​ ಯಾದವ್ ಮತ್ತು ಕಿರಣ್​ ದೇವಿ ಯಾದವ್​ ಅವರ ಐಷಾರಾಮಿ ಬಂಗಲೆ ಇದೆ. ಅಲ್ಲೆಲ್ಲ ಈಗ ಸಿಬಿಐ ಶೋಧ ನಡೆಸಿದೆ. ಇನ್ನು ಈ ಅರುಣ್ ಯಾದವ್ ಲಾಲೂ ಪ್ರಸಾದ್ ಯಾದವ್ ಕುಟುಂಬಕ್ಕೆ ಪರಮಾಪ್ತನಾಗಿದ್ದು, ಇದೇ ವರ್ಷ ಮಾರ್ಚ್​ ತಿಂಗಳಲ್ಲಿ, ರಾಬ್ರಿ ದೇವಿಯವರ ಪಾಟ್ನಾದ ಸಗುಣಾ ಮೋರೆ ಅಪಾರ್ಟ್​ಮೆಂಟ್​ನಲ್ಲಿರುವ ಎಲ್ಲ ಫ್ಲ್ಯಾಟ್​ಗಳನ್ನೂ ಖರೀದಿ ಮಾಡಿದ್ದ ಎಂದು ಮಾಹಿತಿ ಸಿಕ್ಕಿದೆ. ಆ ಬಗ್ಗೆಯೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Land For Job Case: ಲಾಲು ಪ್ರಸಾದ್ ಯಾದವ್‌ಗೆ ಜಾಮೀನು; ಬಿಜೆಪಿ, ಆರ್‌ಜೆಡಿ ಶಾಸಕರ ಮಧ್ಯೆ ಲಡ್ಡು ಜಗಳ

ಅರುಣ್ ಯಾದವ್ ಸಾಚಾ ಎನ್ನಿಸಿಕೊಂಡವನಲ್ಲ. ಮರಳು ವ್ಯವಹಾರದಲ್ಲಿ ಪ್ರಬಲರಾಗಿದ್ದ ಈತನ ವಿರುದ್ಧ ಒಂದು ಬಾರಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೇ ಕಾರಣಕ್ಕೆ ಆರ್​ಜೆಡಿ ಕಳೆದ ಚುನಾವಣೆಯಲ್ಲಿ ಅರುಣ್​ ಯಾದವ್​ಗೆ ಟಿಕೆಟ್ ನೀಡದೆ, ಅವನ ಪತ್ನಿ ಕಿರಣ್​ ಯಾದವ್​ಗೆ ಟಿಕೆಟ್ ಕೊಟ್ಟಿತ್ತು. ಅರುಣ್ ಯಾದವ್-ಕಿರಣ್ ಯಾದವ್​ಗೆ ಸೇರಿದ ಸುಮಾರು 9 ಸ್ಥಳಗಳಲ್ಲಿ ಇನ್ನೂ ಶೋಧಕಾರ್ಯ ನಡೆಯುತ್ತಲೇ ಇದೆ. ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಇವರಿಬ್ಬರ ಪಾತ್ರ ತುಂಬ ಇದೆ ಎಂದು ಹೇಳಲಾಗುತ್ತಿದೆ.

ಲಾಲು ಪ್ರಸಾದ್‌ ಯಾದವ್‌ ಅವರು 2004-09ರ ಅವಧಿಯ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಸಂಬಂಧಿಕರು ಸೇರಿ ಹಲವರಿಂದ ಕಡಿಮೆ ಹಣಕ್ಕೆ ಜಮೀನು ಖರೀದಿಸಿದ ಪ್ರಕರಣ ಇದಾಗಿದ್ದು, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ. ಈಗಾಗಲೇ ಲಾಲು ಪ್ರಸಾದ್‌ ಯಾದವ್‌ ಅವರನ್ನೂ ವಿಚಾರಣೆ ನಡೆಸಲಾಗಿದೆ.

Exit mobile version