ನವದೆಹಲಿ: ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗಷ್ಟೇ ಸಂಚಾರಕ್ಕೆ ಮುಕ್ತವಾಗಿದ್ದ ಟನಲ್-5(ಸುರಂಗ ಮಾರ್ಗ) ಹಾನಿಗೀಡಾಗಿದ್ದು, ಗುಡ್ಡದಿಂದ ಜಾರಿ ಬಿದ್ದ ಕಲ್ಲುಗಳಿಂದ ಸೇನಾ ವಾಹನ ಜಖಂಗೊಂಡಿದೆ. ವಾಹನದಲ್ಲಿದ್ದ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ(Jammu and Kashmir).
ರಾಂಬನ್ ಡೆಪ್ಯುಟಿ ಕಮಿಷನರ್ ಮುಸ್ಸರತ್ ಇಸ್ಲಾಂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ, 270 ಕಿ.ಮೀ. ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜೀವಗಳನ್ನು ರಕ್ಷಿಸಲು ತಕ್ಷಣದ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಹೆದ್ದಾರಿಯ ದುರ್ಬಲ ವಲಯವನ್ನು ತಾಂತ್ರಿಕವಾಗಿ ಮೌಲ್ಯಮಾಪನ ಮಾಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ತಿಳಿಸಿದ್ದಾರೆ. ಈ ಹೆದ್ದಾರಿಯು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಸರ್ವಋತು ಹೆದ್ದಾರಿಯಾಗಿದೆ.
ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿರುವ 880 ಮೀಟರ್ ಉದ್ದದ ಟನರ್-5 ಮಾರ್ಚ್ 16ರಿಂದ ವಾಹನಗಳ ಸಂಚಾಕ್ಕೆ ಮುಕ್ತವಾಗಿತ್ತು. ಗುಡ್ಡದಿಂದ ಆಗಾಗ್ಗೆ ಕಲ್ಲುಗಳು ಉರುಳುವುದಕ್ಕೆ ಕುಖ್ಯಾತವಾಗಿದ್ದ ಪಂಥಿಯಾಲ್‌ನ ಅತ್ಯಂತ ದುರ್ಬಲವಾದ ಪ್ರದೇಶವನ್ನು ಇದು ಬೈಪಾಸ್ ಮಾಡುವುದರಿಂದ ಪ್ರಯಾಣಿಕರಿಗೆ ಹೆಚ್ಚು ಲಾಭವಾಗುತ್ತಿತ್ತು. ಈಗ ಈ ಸುರಂಗ ಮಾರ್ಗದಲ್ಲೂ ಕಲ್ಲು ಉರುಳಿ ಬೀಳುತ್ತಿರುವುದು ಚಿಂತೆಗೆ ಕಾರಣವಾಗಿದೆ.
ಸೇನಾ ವಾಹನಗಳು ಈ ಸುರಂಗ ಮಾರ್ಗದ ಮೂಲಕ ಹೊರಟಿದ್ದವು. ಆಗ ಗುಡ್ಡದಿಂದ ಕಲ್ಲುಗಳ ಉರುಳಿ ಬೀಳಲಾರಂಭಿಸಿದವು. ಸೇನೆಯ ಒಂದು ಐಷಾರಾಮಿ ವಾಹನಕ್ಕೆ ಭಾರೀ ಹಾನಿಯಾಗಿದೆ. ಆದರೆ, ಈ ವಾಹನದಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಸುರಂಗದ ಎರಡೂ ಕಡೆಯಿಂದಲೂ ಗುಡ್ಡದಿಂದ ಕಲ್ಲುಗಳು ಉರುಳುತ್ತಿದ್ದರಿಂದ ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾಯಿತು.
ಇದನ್ನೂ ಓದಿ: Kashmiri Pandit Shot Dead: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಗುಂಡಿಗೆ ಪಂಡಿತ ಬಲಿ
ಎನ್‌ಎಚ್‌ಎಐಗೆ ಸೂಚಿಸಿರುವ ರಾಂಬನ್ ಡೆಪ್ಯೂಟಿ ಕಮಿಷನರ್, ಸೌತ್ ಪೋರ್ಟಲ್ ಆಫ್ ಟನಲ್ ಟಿ -5 (ಟ್ಯೂಬ್ 1) ನ ಆರಂಭದಲ್ಲಿ ಬೃಹತ್ ಕಲ್ಲುಗಳು ಉರುಳುತ್ತಿವೆ. ಈ ಕುರುತು ಕೂಡಲೇ ಪರಿಹಾರ ಕೈಗೊಳ್ಳದಿದ್ದರೆ ಪ್ರಯಾಣಿಕರಿಗೆ ಗಂಭೀರ ಅಪಾಯವನ್ನುಂಟು ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.