Site icon Vistara News

Lanka on fire: ಸಂಕಷ್ಟದಲ್ಲಿರುವ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ಆಯ್ಕೆ

Ranil vikramasinghe

ಕೊಲಂಬೊ: ಆರ್ಥಿಕ ಹೊಡೆತ ಮತ್ತು ರಾಜಕೀಯ ಅಸ್ಥಿರತೆಯಿಂದ ತತ್ತರಿಸಿದ ದ್ವೀಪರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ಅವರು ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಶ್ರೀಲಂಕಾ ಪೊದುಜನ ಪೆರಾಮುನಾ ಪಕ್ಷದ ಬಂಡಾಯ ನಾಯಕ ಡಲ್ಲಾಸ್‌ ಅಲಹಪ್ಪೆರುಮಾ ಮತ್ತು ಜನತಾ ವಿಮುಕ್ತಿ ಪೆರಮುನೆ ನಾಯಕ ಅನುರ ಡಿಸಾನಾಯಾಕೆ ಅವರನ್ನು ಸೋಲಿಸಿದ್ದಾರೆ.

ಯುನೈಟೆಡ್‌ ನೇಶನ್‌ ಪಾರ್ಟಿ ನಾಯಕರಾಗಿರುವ ರನಿಲ್‌ ವಿಕ್ರಮಸಿಂಘೆ ಆರು ಬಾರಿ ದೇಶದ ಪ್ರಧಾನಿಯಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ ಅವರು ಜನರ ದಂಗೆಗೆ ಬೆದರಿ ದೇಶ ಬಿಟ್ಟ ನಂತರ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಾರಿ ಬಹುಮತ ಪಡೆದ ವಿಕ್ರಮಸಿಂಘೆ
ಬುಧವಾರ ಶ್ರೀಲಂಕಾ ಸಂಸತ್ತಿನಲ್ಲಿ ಮತದಾನ ನಡೆಯಿತು. ೨೨೫ ಸದಸ್ಯರ ಸಂಸತ್ತಿನಲ್ಲಿ ೨೨೩ ಮಂದಿ ಮತ ಚಲಾಯಿಸಿದರು. ಇದರ ಪೈಕಿ ನಾಲ್ಕು ಮತಗಳು ಅಸಿಂಧುವಾಗಿದ್ದವು. ಮೂವರು ಪ್ರಧಾನ ಸ್ಪರ್ಧಿಗಳ ನಡುವೆ ಮತಗಳು ಹಂಚಿಹೋಗಿವೆ. ರನಿಲ್‌ ವಿಕ್ರಮ ಸಿಂಘೆ ಅವರು ೧೩೪ ಮತಗಳನ್ನು ಪಡೆದರೆ, ಶ್ರೀಲಂಕಾ ಪೊದುಜನ ಪೆರಾಮುನಾ ಪಕ್ಷದ ಬಂಡಾಯ ನಾಯಕ ಡಲ್ಲಾಸ್‌ ಅಲಹಪ್ಪೆರುಮಾ ೮೨ ಮತಗಳನ್ನು ಪಡೆದರು. ಜನತಾ ವಿಮುಕ್ತಿ ಪೆರಮುನೆ ನಾಯಕ ಅನುರ ಡಿಸಾನಾಯಾಕೆ ಅವರಿಗೆ ಸಿಕ್ಕಿದ್ದು ಕೇವಲ ಮೂರು ಮತ ಮಾತ್ರ.

೪೪ ವರ್ಷದಲ್ಲಿ ಮೊದಲ ಬಾರಿಗೆ ನೇರ ಆಯ್ಕೆ
ಶ್ರೀಲಂಕಾ ಸಂಸತ್ತಿನ ೪೪ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷರನ್ನು ನೇರ ಸಂಸದರು ಆಯ್ಕೆ ಮಾಡಿದ್ದಾರೆ. ೧೯೮೨, ೧೯೮೮, ೧೯೯೯, ೨೦೦೫, ೨೦೧೦, ೨೦೧೫, ೨೦೧೯ರಲ್ಲಿ ನಡೆದ ಅಧ್ಯಕ್ಷರ ಚುನಾವಣೆ ನಡೆದಾಗ ಜನಪ್ರಿಯ ಮತಗಳ ಆಧಾರದಲ್ಲಿ ಆಯ್ಕೆ ನಡೆದಿತ್ತು.
೧೯೯೩ರಲ್ಲಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಹತ್ಯೆ ನಡೆದಾಗ ಮಧ್ಯಂತರದಲ್ಲೇ ಅಧ್ಯಕ್ಷರ ಅವಧಿ ಮುಕ್ತಾಯವಾಗಿತ್ತು. ಆಗ ಡಿ.ಬಿ. ವಿಜೇತುಂಗ ಅವರನ್ನು ಯಾವುದೇ ಮತದಾನವಿಲ್ಲದೆ ಆಯ್ಕೆ ಮಾಡಲಾಗಿತ್ತು. ಅವರು ಪ್ರೇಮದಾಸ ಅವರ ಉಳಿದ ಅವಧಿಯನ್ನು ಮುಕ್ತಾಯಗೊಳಿಸಿದ್ದರು. ಈಗ ಆಯ್ಕೆಯಾಗಿರುವ ರನಿಲ್‌ ವಿಕ್ರಮ ಸಿಂಘೆ ಅವರ ಅಧಿಕಾರ ಅವಧಿ ೨೦೨೪ರವರೆಗೆ ಇರುತ್ತದೆ.

ಅಧ್ಯಕ್ಷರ ಆಯ್ಕೆ ನಡೆದಿದ್ದು ಯಾಕೆ?
ಶ್ರೀಲಂಕಾದಲ್ಲಿ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಇದಕ್ಕೆ ಸರಕಾರ ಇಟ್ಟ ತಪ್ಪು ಹೆಜ್ಜೆಗಳು, ರಾಜಪಕ್ಸ ಕುಟುಂಬದ ನಡೆಗಳೇ ಕಾರಣವೆಂಬ ಆರೋಪ ವ್ಯಕ್ತವಾಗಿದೆ. ಹೀಗಾಗಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ವಿರುದ್ಧ ಜನ ದಂಗೆ ಎದ್ದಿದ್ದರು. ಹೀಗಾಗಿ ಅವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಹೀಗಾಗಿ ಹೊಸ ಅಧ್ಯಕ್ಷರ ಆಯ್ಕೆ ನಡೆದಿದೆ.

ಇದನ್ನೂ ಓದಿ| Lanka on fire: ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ, ರಾಜಪಕ್ಸ ಪಲಾಯನದ ಬೆನ್ನಲ್ಲೇ ಭುಗಿಲೆದ್ದ ಪ್ರತಿಭಟನೆ

Exit mobile version