ನವದೆಹಲಿ: ಸೂರ್ಯನು ದಿನೇದಿನೆ ಪ್ರಖರವಾಗುತ್ತಿದ್ದಾನೆ. ಬೆಳಗ್ಗೆ 10 ಗಂಟೆಯಿಂದಲೇ ಸೆಕೆಯ ಅನುಭವವಾಗುತ್ತಿದೆ, ಬೆವರು ಸುರಿಯುತ್ತಿದೆ. 10 ನಿಮಿಷ ವಿದ್ಯುತ್ ಕಡಿತವಾದರೂ ಇನ್ನಿಲ್ಲದ ಕಸಿವಿಸಿಯಾಗುತ್ತಿದೆ. ಬೇಸಿಗೆಯ ಬೇಗೆ (Harsh Summer) ಈಗಾಗಲೇ ಜಾಸ್ತಿಯಾಗಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಜನ ಮನೆಯಿಂದ ಹೊರ ಬರಲು ಕೂಡ ಯೋಚನೆ ಮಾಡುವಂತಹ ಪರಿಸ್ಥಿತಿ ಇದೆ. ಇದರ ಬೆನ್ನಲ್ಲೇ, ದೇಶದಲ್ಲಿ ಬೇಸಿಗೆ ಕುರಿತು ಹವಾಮಾನ ಇಲಾಖೆ ವರದಿ ಬಿಡುಗಡೆ ಮಾಡಿದ್ದು, ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದ ಬಹುತೇಕ ಭಾಗಗಳಲ್ಲಿ ಹೆಚ್ಚಿನ ಬಿಸಿಲಿರಲಿದೆ ಎಂದು ಮಾಹಿತಿ ನೀಡಿದೆ.
“ದೇಶದ ಬಹುತೇಕ ಭಾಗಗಳಲ್ಲಿ ಈ ಬಾರಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ತಾಪಮಾನ ಇರಲಿದೆ. ಅದರಲ್ಲೂ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಗುಜರಾತ್, ಪಂಜಾಬ್ ಹಾಗೂ ಹರಿಯಾಣದಲ್ಲಿ ಉಷ್ಣ ಗಾಳಿ ಬೀಸುವ ಪ್ರಮಾಣ ಜಾಸ್ತಿ ಇರಲಿದೆ. ಇದರಿಂದ ಈ ಬಾರಿ ಹೆಚ್ಚಿನ ಪ್ರಮಾಣದ ತಾಪಮಾನ ದಾಖಲಾಗಲಿದೆ. ಏಪ್ರಿಲ್, ಮೇ ಹಾಗೂ ಜೂನ್‌ನಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಬಿಸಿಲು ಹೆಚ್ಚಿರಲಿದೆ” ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಮಾಹಿತಿ ನೀಡಿದರು.
“ಕೇಂದ್ರ, ಪೂರ್ವ ಹಾಗೂ ವಾಯವ್ಯ ಭಾರತದಲ್ಲಿ ಗರಿಷ್ಠ ಪ್ರಮಾಣದ ತಾಪಮಾನ ದಾಖಲಾಗಲಿದೆ. ಏಪ್ರಿಲ್, ಮೇ ಹಾಗೂ ಜೂನ್ ಕೊನೆಯವರೆಗೆ ಹೆಚ್ಚಿನ ಬಿಸಿಲು ಇರಲಿದೆ. ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ಇರಲಿದೆ. ಕರಾವಳಿ ಪ್ರದೇಶದಲ್ಲಿ ಗರಿಷ್ಠ 37 ಡಿಗ್ರಿ ತಾಪಮಾನ, ಗಿರಿ-ಶಿಖರ ಪ್ರದೇಶಗಳಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಲಿದೆ. ಆದರೂ, ಏಪ್ರಿಲ್‌ನಲ್ಲಿ 39.2 ಮಿ.ಮೀ ಮಳೆಯಾಗಲಿದ್ದು, ಇದು ವಾಡಿಕೆಯಷ್ಟು ಮಳೆ” ಎಂಬುದಾಗಿ ತಿಳಿಸಿದರು.
ಇದನ್ನೂ ಓದಿ: Star Summer Fashion: ಬೇಸಿಗೆ ಔಟ್‌ಫಿಟ್ಸ್‌ಗೆ ಸೈ ಎಂದ ಗ್ಲಾಮರಸ್ ನಟಿ ರಾಯ್ ಲಕ್ಷ್ಮಿ
ಕರ್ನಾಟಕದ ಪರಿಸ್ಥಿತಿ ಹೇಗಿರಲಿದೆ?
ಕರ್ನಾಟಕದಲ್ಲಿ ಮಾರ್ಚ್ ಕೊನೆಯ ವಾರದಿಂದ ಬಿಸಿಲಿನ ಪ್ರಖರತೆ ಜಾಸ್ತಿಯಾಗುತ್ತ ಹೋಗುತ್ತದೆ. ಆದರೆ, ಕರ್ನಾಟಕದಲ್ಲಿ ಜೂನ್ ಕೊನೆಯವರೆಗೆ ಹೆಚ್ಚಿನ ತಾಪಮಾನ ಇರುವುದಿಲ್ಲ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲು ಇರಲಿದೆ. ಜೂನ್ ಮೊದಲ ವಾರದಲ್ಲಿಯೇ ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗುವುದರಿಂದ ಜೂನ್ ಮಧ್ಯಭಾಗದ ವೇಳೆಗೆ ತಾಪಮಾನ ಕಡಿಮೆಯಾಗಿರುತ್ತದೆ ಎಂದು ತಿಳಿದುಬಂದಿದೆ. ಆದರೂ, ಈ ಬಾರಿ ರಾಜ್ಯದಲ್ಲಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಲಿದೆ ಎನ್ನಲಾಗಿದೆ.
ಬೇಸಿಗೆಯ ತೀವ್ರತೆ ಜಾಸ್ತಿ ಇರುವುದರಿಂದ ಜನ ಹೆಚ್ಚು ನೀರು ಕುಡಿಯುವುದು, ಹಗಲಲ್ಲಿ ಮನೆಯಲ್ಲಿಯೇ ಇರುವುದು, ನಿಯಮಿತವಾಗಿ ಎಳನೀರು ಸೇವನೆ ಸೇರಿ ಹಲವು ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.