ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯು ಭರ್ಜರಿ ಬೇಟೆಯಾಡಿದ್ದು, ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ಪತ್ತೆಗಾಗಿ ಕೈಗೊಂಡ ಕಾರ್ಯಾಚರಣೆಯು ಎನ್‌ಕೌಂಟರ್ (Kashmir Encounter) ಆಗಿ ಪರಿವರ್ತನೆಯಾಗಿದ್ದು, ಇದೇ ವೇಳೆ ಮೇಲುಗೈ ಸಾಧಿಸಿದ ಯೋಧರು ಇಬ್ಬರನ್ನು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಪುಲ್ವಾಮ ಜಿಲ್ಲೆಯ ಲಾರೊ-ಪರಿಗ್ರಮ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಕುರಿತು ನಿಖರ ಮಾಹಿತಿ ಮೇರೆಗೆ ಯೋಧರು ಭಾನುವಾರ ಸಂಜೆಯೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಕಾರ್ಯಾಚರಣೆ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಭಾರತದ ಯೋಧರು ಕೂಡ ತಿರುಗೇಟು ನೀಡಿದ್ದು, ಟಾಪ್ ಕಮಾಂಡರ್ ಸೇರಿ ಇಬ್ಬರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಇಬ್ಬರು ಉಗ್ರರ ಹಿನ್ನೆಲೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಇಬ್ಬರು ಉಗ್ರರ ಶವಗಳಿಗಾಗಿ ಶೋಧ ನಡೆಯುತ್ತಿದೆ. ಇನ್ನೂ ಉಗ್ರರು ಅಡಗಿರುವ ಶಂಕೆ ಇರುವುದರಿಂದ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ. ಆಗಸ್ಟ್ 5ರಂದೂ ಇದೇ ರೀತಿ ರಾಜೌರಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಯೋಧರು, ಒಬ್ಬ ಉಗ್ರನನ್ನು ಎನ್‌ಕೌಂಟರ್ ಮಾಡಿದ್ದರು.
ಇದನ್ನೂ ಓದಿ: ರಾಜೌರಿ, ಬಾರಾಮುಲ್ಲಾದಲ್ಲಿ ಎನ್‌ಕೌಂಟರ್, ಇಬ್ಬರು ಉಗ್ರರ ಹತ್ಯೆ; ಜಮ್ಮುವಿಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
ಕುಲ್ಗಾಮ್ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಎನ್‌ಕೌಂಟರ್ ವೇಳೆ ಸೇನೆಯ ಮೂವರು ಯೋಧರು ಹುತಾತ್ಮರಾಗಿದ್ದರು. ಹಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿದ್ದು, ಇದೇ ವೇಳೆ ಗುಂಡಿನ ಚಕಮಕಿ ನಡೆದಿತ್ತು. ಉಗ್ರರು ಏಕಾಏಕಿ ದಾಳಿ ನಡೆಸಿದ ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದರು.