Site icon Vistara News

Lashkar Terrorist: ಲಷ್ಕರೆ ಉಗ್ರ ರಿಯಾಜ್‌ ಅಹ್ಮದ್‌ ಬಂಧನ; ಈತ ಮಾಜಿ ಯೋಧ!

Lashkar terrorist Riyaz Ahmed

Lashkar terrorist Riyaz Ahmed arrested in Delhi, is a retired army personnel: Police

ನವದೆಹಲಿ: ಭಾರತೀಯ ಸೇನೆಯಲ್ಲಿದ್ದವರು (Indian Army), ಸೇನೆಯಲ್ಲಿದ್ದು ನಿವೃತ್ತರಾದವರಿಗೆ ಅಪಾರ ದೇಶಪ್ರೇಮ, ಶಿಸ್ತು ಇರುತ್ತದೆ. ನಮ್ಮ ದೇಶದ ಬಗ್ಗೆ ಅಭಿಮಾನ ಇರುತ್ತದೆ. ಆದರೆ, ದೆಹಲಿಯಲ್ಲಿ ರಿಯಾಜ್‌ ಅಹ್ಮದ್‌ (Riyaz Ahmed) ಎಂಬ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ (Lashkar-e-Taiba) ಉಗ್ರನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದು, ಈತ ಇದಕ್ಕೂ ಮೊದಲು ಸೇನೆಯಲ್ಲಿದ್ದ ಎಂದು ತಿಳಿದುಬಂದಿದೆ. ಸೇನೆಯಿಂದ ನಿವೃತ್ತನಾದ ಬಳಿಕ ಈತ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸರು ಸ್ಫೋಟಕ ಮಾಹಿತಿ ನೀಡಿದ್ದಾರೆ.

“ಬಂಧಿತ ರಿಯಾಜ್‌ ಅಹ್ಮದ್‌ ಲಷ್ಕರೆ ತಯ್ಬಾದ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗದ್ದಾನೆ. ಈತನು ಇದಕ್ಕೂ ಮೊದಲು ಸೇನೆಯಲ್ಲಿದ್ದು ನಿವೃತ್ತಿ ಹೊಂದಿದ್ದಾನೆ. ನಿವೃತ್ತಿ ಬಳಿಕ ತನ್ನ ಸಹಚರರೊಂದಿಗೆ ಜಮ್ಮು-ಕಾಶ್ಮೀರದ ಗಡಿಯಲ್ಲಿ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡು, ಅವುಗಳನ್ನು ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗಾಗಿ ಉಗ್ರರಿಗೆ ಪೂರೈಕೆ ಮಾಡುತ್ತಿದ್ದ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡಿಸುವುದು ಈತನ ಉದ್ದೇಶವಾಗಿತ್ತು” ಎಂದು ದೆಹಲಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ನ್ಯೂ ಡೆಲ್ಲಿ ರೈಲ್ವೆ ಸ್ಟೇಷನ್‌ನಲ್ಲಿ ದೆಹಲಿ ಪೊಲೀಸರು ಭಾನುವಾರ (ಫೆಬ್ರವರಿ 4) ರಿಯಾಜ್‌ ಅಹ್ಮದ್‌ನನ್ನು ಬಂಧಿಸಿದ್ದಾರೆ. ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಇತ್ತೀಚೆಗೆ ಪೊಲೀಸರು ಉಗ್ರರ ಜಾಲವೊಂದನ್ನು ಭೇದಿಸಿದ್ದು, ಶಸ್ತ್ರಾಸ್ತ್ರಗಳ ಸಾಗಣೆಯನ್ನು ಪತ್ತೆಹಚ್ಚಿದ್ದಾರೆ. ಇದಕ್ಕೂ ಮೊದಲು ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಬಂಧಿತ ಉಗ್ರರು ನೀಡಿದ ಮಾಹಿತಿ ಆಧರಿಸಿ ಜಾಲ ಭೇದಿಸಲಾಗಿದೆ. ಈ ಜಾಲ ಬಯಲಾದ ಬಳಿಕ ರಿಯಾಜ್‌ ಅಹ್ಮದ್‌ ಕುರಿತು ಮಾಹಿತಿ ಲಭ್ಯವಾಗಿದ್ದು, ಅದರಂತೆ ದೆಹಲಿ ಪೊಲೀಸರು ರಿಯಾಜ್‌ ಅಹ್ಮದ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹೆಣವಾದ ಮುಂಬೈ ದಾಳಿ ರೂವಾರಿ, ಲಷ್ಕರೆ ತಯ್ಬಾ ಉಗ್ರ ಹಫೀಜ್‌; ವಿಶ್ವಸಂಸ್ಥೆ ಮಾಹಿತಿ

ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ಜತೆ ಸಂಪರ್ಕ ಸಾಧಿಸಿ, ಗಡಿಯಲ್ಲಿ ಅವರಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ, ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಪೂರೈಕೆ ಮಾಡುವುದು ಇವರ ಕೆಲಸವಾಗಿತ್ತು. ರಿಯಾಜ್‌ ಅಹ್ಮದ್‌ ಉಗ್ರನು ಖುರ್ಷೀದ್‌ ಅಹ್ಮದ್‌ ಹಾಗೂ ಗುಲಾಂ ಸರ್ವಾರ್‌ ಎಂಬುವರ ಜತೆಗೂಡಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಉಗ್ರರಿಗೆ ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ದೆಹಲಿ ಹಾಗೂ ಜಮ್ಮು-ಕಾಶ್ಮೀರ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version