ಜಮ್ಮು: 1990 ದಶಕದ ಆರಂಭದಲ್ಲಿ ನಿತ್ಯ ನಡೆಯುತ್ತಿದ್ದ ಹತ್ಯೆಗಳಿಂದ ತಪ್ಪಿಸಿಕೊಳ್ಳಲು ಕಾಶ್ಮೀರಿ ಪಂಡಿತರು ಸಾಮೂಹಿಕವಾಗಿ ಜಮ್ಮುವಿಗೆ ವಲಸೆ ಬಂದಿದ್ದರು. ಆ ಬಳಿಕ ಈ ಬಗ್ಗೆ ದೇಶದಲ್ಲಿ ಅನೇಕ ಚರ್ಚೆಗಳು ನಡೆದಿವೆ, ರಾಜಕೀಯ ಆರೋಪ- ಪ್ರತ್ಯಾರೋಪಗಳು ಈವರೆಗೆ ನಡೆದುಕೊಂಡು ಬಂದಿವೆ. ಆದರೆ, ಕಳೆದ ಮೂರ್ನಾಲ್ಕು ವರ್ಷದಲ್ಲಿ ಮತ್ತೆ ಕಾಶ್ಮೀರಿ ಪಂಡಿತರ ಗುಳೆ ಹೆಚ್ಚಾಗಿದ್ದು, ಶೋಪಿಯಾನ್ ಜಿಲ್ಲೆಯ ಕೊನೆಯ ಕಾಶ್ಮೀರಿ(Last Kashmiri Pandit) ಕೂಡ ಈಗ ಅಲ್ಲಿಂದ ಜಮ್ಮುವಿಗೆ ವಲಸೆ ಬಂದಿದ್ದಾರೆ. ಇದರೊಂದಿಗೆ ಕಣಿವೆ ರಾಜ್ಯವನ್ನು ಕಾಶ್ಮೀರ ಪಂಡಿತರು ತೊರೆದಂತಾಗಿದೆ!
ಹೌದು. ಇದು ನಿಜ. ಡಾಲಿ ಕುಮಾರಿ, ಶೋಪಿಯಾನ್ ಜಿಲ್ಲೆ ತೊರೆದ ಕೊನೆಯ ಕಾಶ್ಮೀರಿ ಪಂಡಿತ ಮಹಿಳೆಯಾಗಿದ್ದಾರೆ. ಇವರು ಚೌಧರಿಗುಂದ ಹಳ್ಳಿಯವರ. ಕಳೆದ ಸಂಜೆ ಅಂದರೆ ಗುರುವಾರ ಸಾಯಂಕಾಲ ಕಣಿವೆಯನ್ನು ತೊರೆದು ಜಮ್ಮುವಿಗೆ ಸ್ಥಳಾಂತರಗೊಂಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚಿಗೆ ಟಾರ್ಗೆಟ್ ಕಿಲ್ಲಿಂಗ್‌ನಿಂದಾಗಿ ಹೆದರಿ ಏಳು ಕಾಶ್ಮೀರಿ ಪಂಡಿತರ ಕುಟುಂಬಗಳು ಕಣಿವೆ ರಾಜ್ಯವನ್ನು ತೊರೆದಿದ್ದವು. ಈ ಹಿನ್ನೆಲೆಯಲ್ಲಿ ಡಾಲಿ ಕುಮಾರಿ ಕೂಡ ಅಲ್ಲಿಂದ ಹೊರ ಬಂದಿದ್ದಾರೆ.
ಹಳ್ಳಿಯನ್ನು ಎಲ್ಲ ಕಾಶ್ಮೀರಿ ಪಂಡಿತರು ತೊರೆದ ಬಳಿಕವೂ ಇನ್ನೂ ಸ್ವಲ್ಪ ದಿನಗಳ ಕಾಲ ಅಲ್ಲೆ ಉಳಿಯುವ ಪ್ರಯತ್ನವನ್ನು ಡಾಲಿ ಕುಮಾರಿ ಅವರು ಮಾಡಿದ್ದರು. ಆದರೆ, ಅಂತಿಮವಾಗಿ ಅವರು ಕೂಡ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹಳ್ಳಿಯಲ್ಲಿ ಭಯದ ವಾತಾವರಣವಿದೆ. ಹಳ್ಳಿಯನ್ನೇ ತೊರೆಯದೇ ಇನ್ನೇನು ನನ್ನ ಕೈಯಿಂದ ಮಾಡಲು ಸಾಧ್ಯವಿತ್ತು ಎಂದು ಡಾಲಿ ಕುಮಾರಿ ಪ್ರಶ್ನಿಸಿದ್ದಾರೆ. ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಮರಳುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ಚೌಧರಿಗುಂದ ಹಳ್ಳಿಯಲ್ಲಿ ಅಕ್ಟೋಬರ್ 15ರಂದು ಪಂಡಿತ ಪೂರಣ್ ಕೃಷ್ಣನ್ ಭಟ್ ಎಂಬಾತನನ್ನು ಅವರ ಮನೆಯ ಹೊರಗೇ ಉಗ್ರರು ಕೊಂದು ಹಾಕಿದ್ದರು. ಈ ಘಟನೆ ಸಂಭವಿಸುವ ಎರಡು ತಿಂಗಳ ಮುಂಚೆ ಉಗ್ರರು ಶೋಫಿಯಾನ್ ಜಿಲ್ಲೆಯ ಚೋಟಿಗಾಂವ್ ಹಳ್ಳಿಯ ಕಾಶ್ಮೀರ ಪಂಡಿತರೊಬ್ಬರನ್ನು ಹತ್ಯೆ ಮಾಡಿದ್ದರು. ಚೌಧರಿಗುಂದ್ ಮತ್ತು ಚೋಟಿಪೋರಾ ಹಳ್ಳಿಗಳಲ್ಲಿ ಒಟ್ಟು 11 ಪಂಡಿತರ ಕುಟುಂಬಗಳಿದ್ದವು. ಈಗ ಆ ಎಲ್ಲ ಕುಟುಂಬಗಳು ಜಮ್ಮು ಪ್ರದೇಶಕ್ಕೆ ಸ್ಥಳಾಂತರಗೊಂಡಂತಾಗಿದೆ.
ಇದನ್ನೂ ಓದಿ | ಉಗ್ರರ ದಾಳಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತ ಬಲಿ; ಮನೆ ಬಾಗಿಲಿಗೇ ಬಂದು ಗುಂಡಿಟ್ಟ ಭಯೋತ್ಪಾದಕರು