ನವ ದೆಹಲಿ: ರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ಗಾನ ಕೋಗಿಲೆ, ಲತಾ ಮಂಗೇಶ್ಕರ್ ಚೌಕ(Lata Chowk)ವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕೃಷ್ಣರೆಡ್ಡಿ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು. ಈ ಚೌಕವನ್ನು ಅಭಿವೃದ್ಧಿಪಡಿಸಲು ಉತ್ತರ ಪ್ರದೇಶ ಸರ್ಕಾರವು 7.9 ಕೋಟಿ ರೂ. ವೆಚ್ಚ ಮಾಡಿದೆ.
ನಾಲ್ಕು ರಸ್ತೆಗಳನ್ನು ಒಂದುಗೂಡಿಸುವ ಈ ಚೌಕದಲ್ಲಿ 40 ಅಡಿ ಉದ್ದ ಹಾಗೂ 12 ಮೀಟರ್ ಎತ್ತರದ ವೀಣೆಯನ್ನು ಪ್ರತಿಷ್ಠಾಪಿಸಲಾಗಿದೆ. ಅಯೋಧ್ಯೆ ನಗರದಲ್ಲಿ ಇದೊಂದು ಆಕರ್ಷಣೀಯ ಚೌಕವಾಗಿ ರೂಪುಗೊಂಡಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಾಗ ಲತಾ ದೀದಿ ಅವರು ನನಗೆ ಕರೆ ಮಾಡಿದ್ದರು ಮತ್ತು ತುಂಬ ಎಮೋಷನಲ್ ಆಗಿದ್ದರು. ಇವತ್ತು ನನಗೆ ಅವರು ಹಾಡಿದ ಮನ್ ಕಿ ಅಯೋಧ್ಯಾ ತಬ್ ತಕ್ ಸೋನೀ ಜಬ್ ತಕ್ ರಾಮ್ ನ ಆಯೀ ಗೀತೆ ನೆನಪಾಗುತ್ತಿದೆ. ರಾಮ್ ಪೌಡಿ ಮತ್ತು ಸರಯೂ ನದಿಯ ಹತ್ತಿರದಲ್ಲೇ ಲತಾ ಮಂಗೇಶ್ಕರ್ ಚೌಕ ನಿರ್ಮಿಸಲಾಗಿದೆ. ಲತಾ ಚೌಕಕ್ಕೆ ಇದಕ್ಕಿಂತ ಮತ್ತೊಂದು ಉತ್ತಮ ಜಾಗ ಸಿಗಲಾರದು. ಲತಾ ದೀದಿ ಹಾಡಿದ ಭಜನೆಗಳಿಂದಾಗಿ ರಾಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾನೆ ಎಂದು ಹೇಳಿದ್ದಾರೆ.
ಸಂಗೀತ ಆಸಕ್ತರು ಮತ್ತು ಪ್ರವಾಸಿಗರಿಗೆ ಈ ಸ್ಥಳ ಆಕರ್ಷಣೀಯವಾಗಿರಲಿದೆ. ದೇಶದಲ್ಲಿ ಬೃಹತ್ತಾದ ಸಂಗೀತ ಉಪಕರಣವನ್ನು ಪ್ರತಿಷ್ಠಾಪಿಸಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಾಜೆಕ್ಟ್ ಮೇಲ್ವಿಚಾರಣೆಯನ್ನು ಹೊಂದಿರುವ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಅವರು, ಈ ಚೌಕ ಅಭಿವೃದ್ಧಿಗೆ 7.9 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು ಅಯೋಧ್ಯೆ ನಗರದ ಅತಿದೊಡ್ಡ ಪ್ರಾಜೆಕ್ಟ್ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Ram Mandir | ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ಅಯೋಧ್ಯೆ ರಾಮ ದೇಗುಲಕ್ಕೆ ಭಕ್ತರ ಪ್ರವೇಶ