ಜೈಪುರ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ (Rajasthan Assembly Election) ದಿನಾಂಕ ಘೋಷಿಸಲಾಗಿದ್ದು, ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಅದರಲ್ಲೂ, ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿದ ಉಚಿತ ಗ್ಯಾರಂಟಿ ಯೋಜನೆಗಳು (Congress Guarantee) ಖ್ಯಾತಿ ಗಳಿಸಿದ, ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾದ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲೂ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದೆ. “ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ಯೋಜನೆ ಜಾರಿ, 2 ರೂ.ಗೆ ಗೋವಿನ ಸಗಣಿ ಸೇರಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳು ಯಾವವು?
- ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು
- 2 ರೂಪಾಯಿಗೆ ಒಂದು ಕೆ.ಜಿ ಗೋವಿನ ಸಗಣಿ ವಿತರಣೆ ಮಾಡುವುದು
- ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ಅಥವಾ ಟ್ಯಾಬ್ಲೆಟ್ ವಿತರಣೆ ಮಾಡುವುದು
- ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ
- ಒಂದು ಕೋಟಿ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ಫೊನ್ ನೀಡುವುದು
राजस्थान में #कांग्रेस_फिर_से
— Ashok Gehlot (@ashokgehlot51) October 27, 2023
तो ये 7 चीजें होंगी गारंटी से
रजिस्ट्रेशन के लिए अभी मिस्ड कॉल करें: 8587070707#कांग्रेस_की7गारंटी pic.twitter.com/ImXuxpd8au
ಎಲ್ಲ ಭರವಸೆ ಈಡೇರಿಸಿದ್ದೇವೆ
“ಜನರಿಗೆ ನೀಡುವ ಎಲ್ಲ ಭರವಸೆಗಳನ್ನು ಈಡೇರಿಸಬೇಕು ಎಂಬುದಾಗಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲೇ ಸೂಚಿಸಿದ್ದಾರೆ. ಅದರಂತೆ, ನಮ್ಮ ಸರ್ಕಾರವು ಎಲ್ಲ ಭರವಸೆಗಳನ್ನು ಈಡೇರಿಸಿದೆ. ಕಳೆದ ಬಾರಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ವಾರದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಘೋಷಿಸಿದ್ದರು. ಅದರಂತೆಯೇ ಕಾಂಗ್ರೆಸ್ ಸರ್ಕಾರವು ರೈತರ ಸಾಲ ಮನ್ನಾ ಮಾಡಿದೆ. ಮುಂದಿನ ದಿನಗಳಲ್ಲೂ ಹೀಗೆಯೇ ಜನರ ಹಿತಕ್ಕಾಗಿ ಕೆಲಸ ಮಾಡಲಾಗುವುದು” ಎಂದರು. ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮನೆಗೆ ಇ.ಡಿ ದಾಳಿ ಕುರಿತು ಮಾತನಾಡಿದ ಅವರು, “ಚುನಾವಣೆಯಲ್ಲಿ ಸೋಲಿನ ಭಯದಿಂದ ಬಿಜೆಪಿಯು ಇಂತಹ ಅಸ್ತ್ರ ಬಳಸುತ್ತಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ; ಅಶೋಕ್ ಗೆಹ್ಲೋಟ್ ಪುತ್ರಗೆ ಇ.ಡಿ ಸಮನ್ಸ್; ಕೈ ರಾಜ್ಯಾಧ್ಯಕ್ಷರ ಮನೆಗೆ ದಾಳಿ
ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ.. ಅಶೋಕ್ ಗೆಹ್ಲೋಟ್ ಹಾಗೂ ಅವರದ್ದೇ ಪಕ್ಷದ ಸಚಿನ್ ಪೈಲಟ್ ಮಧ್ಯೆ ಆಗಾಗ ಭಿನ್ನಮತ ಸ್ಫೋಟವಾಗುತ್ತದೆ. ಇದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದ್ದು, ಈಗಾಗಲೇ ಹಲವು ಬಾರಿ ಬಂಡಾಯವೆಬ್ಬಿಸಿ, ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸಿ ವಿಫಲವಾಗಿದೆ. ಉಚಿತ ಯೋಜನೆಗಳ ಘೋಷಣೆ ಮೂಲಕ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದರೆ, ಬಿಜೆಪಿಗೆ ಮೋದಿ ನಾಮದ ಬಲವೊಂದೇ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಆಂತರಿಕ ಕಚ್ಚಾಟವೇ ಮುಳುವಾಗುವ ಸಾಧ್ಯತೆ ಇದೆ.