ಶ್ರೀನಗರ: ಜಮ್ಮು-ಕಾಶ್ಮೀರದ ರಾಮ್‌ಬನ್ ಜಿಲ್ಲೆ ಬನಿಹಾಲ್ ಪ್ರದೇಶದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju Car Accident) ಅವರ ಕಾರು ಅಪಘಾತಕ್ಕೀಡಾಗಿದೆ. ಕಿರಣ್ ರಿಜಿಜು ಅವರು ಕುಳಿತಿದ್ದ ಕಾರಿಗೆ ಟ್ರಕ್ ಡಿಕ್ಕಿಯಾಗಿದ್ದು, ಸಚಿವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. “ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಇದೊಂದು ಸಣ್ಣ ಅಪಘಾತವಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ಜಮ್ಮು-ಕಾಶ್ಮೀರ ಎಡಿಜಿ ಮುಕೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇಲ್ಲಿದೆ ವಿಡಿಯೊ
ಅಪಘಾತ ಸಂಭವಿಸುತ್ತಲೇ ಭದ್ರತಾ ಸಿಬ್ಬಂದಿಯು ಕಾರಿನಲ್ಲಿದ್ದ ಕೇಂದ್ರ ಸಚಿವರನ್ನು ಕೆಳಗೆ ಇಳಿಸಿದ್ದಾರೆ. ಕೂಡಲೇ ಕೆಳಗಿಳಿದ ಸಚಿವರು ಸುಧಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಚಿವರು ಕಪ್ಪು ಬಣ್ಣದ ಸ್ಕಾರ್ಪಿಯೊ ಕಾರ್‌ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಾರಿಗೆ ಟ್ರಕ್ ಡಿಕ್ಕಿಯಾಗಿದೆ. ಅಪಘಾತದ ಬಳಿಕ ಸುಧಾರಿಸಿಕೊಂಡ ಕಿರಣ್ ರಿಜಿಜು ಅವರು ದೆಹಲಿಗೆ ವಾಪಸಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಬುಲೆಟ್‌ಪ್ರೂಫ್ ಕಾರು ಜಖಂಗೊಂಡಿದೆ.
ಅಪಘಾತಕ್ಕೂ ಮೊದಲು ಸುರಂಗದ ವಿಡಿಯೊ ಹಂಚಿಕೊಂಡಿದ್ದ ಸಚಿವ
ಉಧಮ್‌ಪುರದಿಂದ ಶ್ರೀನಗರಕ್ಕೆ ತೆರಳುದ್ದ ಕಿರಣ್ ರಿಜಿಜು ಅವರು ಅಪಘಾತಕ್ಕೂ ಮೊದಲು ವಿಡಿಯೊ ಪೋಸ್ಟ್ ಮಾಡಿದ್ದಾರೆ. “ಉಧಮ್‌ಪುರದಿಂದ ಶ್ರೀನಗರದಿಂದ ತೆರಳುವಾಗ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸುರಂಗ ಮಾರ್ಗವಾಗಿ ತೆರಳುತ್ತಿದ್ದೇನೆ. ಹೆದ್ದಾರಿ ನಿರ್ಮಾಣದಲ್ಲಿ ಭಾರಿ ಸುಧಾರಣೆಯಾಗಿದೆ” ಎಂದು ಟ್ವೀಟ್ ಮಾಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತಕ್ಕೂ ಮೊದಲು ಉಧಮ್‌ಪುರದಲ್ಲಿ ಕಿರಣ್ ರಿಜಿಜು ಅವರು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜತೆ ಮಾತುಕತೆ ನಡೆಸಿದ್ದರು. ಇದರ ಕುರಿತು ಕೂಡ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: IPL 2023: ಅಪಘಾತದ ಬಳಿಕ ಮೊದಲ ಬಾರಿಗೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ರಿಷಭ್ ಪಂತ್