Site icon Vistara News

Lawrence Bishnoi: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ ಸಹಚರರ ಆಸ್ತಿ ಮುಟ್ಟುಗೋಲು ಹಾಕಿದ ಎನ್‌ಐಎ

NIA

NIA

ನವದೆಹಲಿ: ದರೋಡೆಕೋರರು, ಭಯೋತ್ಪಾದಕರು, ಕಳ್ಳ ಸಾಗಣೆದಾರರ ವಿರುದ್ಧ ಕಠಿಣ ಕ್ರಮವನ್ನು ಮುಂದುವರಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶನಿವಾರ (ಜನವರಿ 6) ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿಯ (Lawrence Bishnoi) ಸಹಚರರ ಒಡೆತನದ ನಾಲ್ಕು ಆಸ್ತಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ-UAPA) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ.

ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಮೂರು ಸ್ಥಿರ ಮತ್ತು ಒಂದು ಚರಾಸ್ತಿ ಸೇರಿವೆ ಎಂದು ಎನ್‌ಐಎ ತಿಳಿಸಿದೆ. ಈ ಆಸ್ತಿಗಳನ್ನು ಭಯೋತ್ಪಾದಕ ಪಿತೂರಿಗಳನ್ನು ನಡೆಸಲು ಮತ್ತು ಗಂಭೀರ ಅಪರಾಧಗಳನ್ನು ಕಾರ್ಯಗತಗೊಳಿಸಲು ಬಳಸಲಾಗುತ್ತಿತ್ತು ಎಂದೂ ಸಂಸ್ಥೆ ಹೇಳಿದೆ.

ಆಸ್ತಿಗಳ ವಿವರ

ಲಾರೆನ್ಸ್ ಬಿಷ್ಣೋಯಿ ಸಹಚರರಿಗೆ ಆಶ್ರಯ ನೀಡಿದ್ದ ಲಖನೌದ ಗೋಮತಿ ನಗರದಲ್ಲಿರುವ ಫ್ಲ್ಯಾಟ್ ವಿಕಾಸ್ ಸಿಂಗ್‌ ಹೆಸರಿನಲ್ಲಿದೆ. ಪಂಜಾಬ್‌ನ ಫಾಜಿಲ್ಕಾದಲ್ಲಿರುವ ಎರಡು ಆಸ್ತಿಗಳು ದಲೀಪ್ ಕುಮಾರ್‌ಗೆ ಸೇರಿದ್ದಾಗಿದೆ. ಚರಾಸ್ತಿ ಫಾರ್ಚೂನರ್ ಕಾರು ಹರಿಯಾಣದ ಯಮುನಾ ನಗರದಲ್ಲಿರುವ ಜೋಗಿಂದರ್ ಸಿಂಗ್‌ ಹೆಸರಿನಲ್ಲಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ. ಲಾರೆನ್ಸ್ ಬಿಷ್ಣೋಯಿಯ ಪ್ರಮುಖ ಸಹಚರರಲ್ಲಿ ಒಬ್ಬನಾಗಿರುವ ವಿಕಾಸ್ ಸಿಂಗ್, 2022ರ ಮೇ 9ರಂದು ಪಂಜಾಬ್ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ನಡೆದ ಆರ್‌ಪಿಜಿ (RPG) ದಾಳಿಯಲ್ಲಿ ಭಾಗಿಯಾಗಿದ್ದ ಆರೋಪಿಗಳು ಸೇರಿದಂತೆ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಾನೆ ಎಂದು ಸಂಸ್ಥೆ ತಿಳಿಸಿದೆ.

ಬಿಷ್ಣೋಯಿ ಆಪ್ತ ಗ್ಯಾಂಗ್‌ಸ್ಟರ್‌ ಕಲಾ ರಾಣಾ ತಂದೆಯಾಗಿರುವ ಜೋಗಿಂದರ್ ಸಿಂಗ್, ಭಯೋತ್ಪಾದಕ ಕೃತ್ಯಗಳಲ್ಲಿ ಬಳಸುವ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುವ ಉದ್ದೇಶಕ್ಕಾಗಿ ತನ್ನ ಫಾರ್ಚೂನರ್ ಕಾರನ್ನು ನೀಡಿದ್ದ. ದಲೀಪ್ ಕುಮಾರ್‌ಗೆ ಸೇರಿದ ಆಸ್ತಿಯನ್ನು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಮತ್ತು ಭಯೋತ್ಪಾದಕ ಗ್ಯಾಂಗ್ ಸದಸ್ಯರಿಗೆ ಆಶ್ರಯ ನೀಡಲು ಗೋದಾಮಿನಂತೆ ಬಳಸಲಾಗುತ್ತಿತ್ತು. ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಸಹಚರರ ವಿರುದ್ಧ ಎನ್‌ಐಎ 2022ರ ಆಗಸ್ಟ್‌ನಿಂದ ತನಿಖೆ ನಡೆಸುತ್ತಿದೆ.

ದೇಶಾದ್ಯಂತ ಹರಡಿದ ಜಾಲ

“ಈ ಗ್ಯಾಂಗ್ ತನ್ನ ಅಪರಾಧ ಜಾಲವನ್ನು ದೇಶದ ಹಲವು ರಾಜ್ಯಗಳಲ್ಲಿ ಹರಡಿದೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಈ ಜಾಲ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮತ್ತು ಪ್ರದೀಪ್ ಕುಮಾರ್ ಅವರಂತಹ ಧಾರ್ಮಿಕ ಮತ್ತು ಸಾಮಾಜಿಕ ನಾಯಕರ ಹತ್ಯೆಗಳಂತಹ ಅಪರಾಧಗಳಲ್ಲಿ ಭಾಗಿಯಾಗಿದೆ. ಜತೆಗೆ ಉದ್ಯಮಿಗಳು ಮತ್ತು ವೃತ್ತಿಪರರಿಂದ ದೊಡ್ಡ ಪ್ರಮಾಣದ ಸುಲಿಗೆಗಳನ್ನು ಮಾಡುತ್ತಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ. ʼʼಮಾತ್ರವಲ್ಲ ಪಾಕಿಸ್ತಾನ ಮತ್ತು ಕೆನಡಾ ಸೇರಿದಂತೆ ವಿದೇಶಗಳಲ್ಲಿಯೂ ಪಿತೂರಿ ನಡೆಸಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಗೃಹ ಸಚಿವಾಲಯ (MHA) ಬಿಷ್ಣೋಯಿ ಆಪ್ತ, ಕೆನಡಾ ಮೂಲದ ಸತ್ವಿಂದರ್ ಸಿಂಗ್ ಆಲಿಯಾಸ್ ಗೋಲ್ಡಿ ಬ್ರಾರ್‌ನನ್ನು ಯುಎಪಿಎ ಅಡಿಯಲ್ಲಿ ʼಭಯೋತ್ಪಾದಕʼ ಎಂದು ಘೋಷಿಸಿತ್ತು. ಉತ್ತರ ಭಾರತ ಮೂಲದ ಬಿಷ್ಣೋಯಿ ಸುಮಾರು 700 ಸದಸ್ಯರ ಅತಿದೊಡ್ಡ ಜಾಲವನ್ನು ನಡೆಸುತ್ತಿದ್ದಾನೆ. 2015ರಿಂದ ಆತ ಜೈಲಿನಲ್ಲಿದ್ದಾನೆ. ಆತನ ವಿರುದ್ಧ ನ್ಯಾಯಾಲಯಗಳಲ್ಲಿ ಅನೇಕ ಪ್ರಕರಣಗಳಿವೆ.

ಇದನ್ನೂ ಓದಿ: Goldy Brar: ಸಿಧು ಮೂಸೆವಾಲಾ ಹಂತಕ ಗೋಲ್ಡಿ ಬ್ರಾರ್ ಈಗ ‘ಭಯೋತ್ಪಾದಕ’

Exit mobile version